ಹುಸಿ ಬಾಂಬ್ ಬೆದರಿಕೆ: ಇಬ್ಬರ ಆರೋಪಿಗಳ ಬಂಧನ
ಬೆಂಗಳೂರು, ಜು.9:ಕಬ್ಬನ್ ಉದ್ಯಾನವನದಲ್ಲಿ ಬಾಂಬ್ ಇದೆ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಆತಂಕ ಸೃಷ್ಟಿಸಲು ಪ್ರಯತ್ನಿಸಿದ್ದ ಆರೋಪದ ಮೇಲೆ ಮೂವರನ್ನು ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ.ರಾಮನಗರ ನಿವಾಸಿಗಳಾದ ಬಾಬು(24), ಝಾಕೀರ್ (22) ಹಾಗೂ ಖಾಝಾ (20)ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ: ಬಂಧಿತ ಮೂವರು ರೇಷ್ಮೆ ನೂಲು ತೆಗೆಯುವ ಘಟಕವೊಂದರಲ್ಲಿ ಕಾರ್ಮಿಕರಾಗಿದ್ದು, ಜು.7ರಂದು ಹೊಸಕೋಟೆ ತಾಲೂಕಿನ ಅರಿಶಿನ ಕುಂಟೆಯಲ್ಲಿರುವ ಅಂಗಡಿಯಲ್ಲಿ ಎರಡು ಮೊಬೈಲ್ ಕಳವು ಮಾಡಿ ನಂತರ ಅದೇ ದಿನ ಹೊಸಕೋಟೆ ನಗರ ಕುರುಬರ ಪೇಟೆಯ ಅಂಗಡಿಯಲ್ಲಿ ಒಂದು ಮೊಬೈಲ್ ಕಳವು ಮಾಡಿ ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಕದ್ದ ಮೊಬೈಲ್ ಹಾಗೂ ಸಿಮ್ ಬಳಸಿ ಆರೋಪಿಗಳು ಶಾಂತಿಭಂಗಕ್ಕೆ ಧಕ್ಕೆ ಉಂಟು ಮಾಡುವ ಹಿನ್ನಲೆಯಲ್ಲಿ ಜು.7 ರಂದು ರಾತ್ರಿ ಪೊಲೀಸ್ ಸಹಾಯವಾಣಿ 100ಗೆ ಕರೆ ಮಾಡಿ ಕಬ್ಬನ್ ಉದ್ಯಾನದಲ್ಲಿ ಬಾಂಬ್ ಇದೆ. ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಬಳಿಕ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಉದ್ಯಾನಕ್ಕೆ ತೆರಳಿ ತಪಾಸಣೆ ನಡೆಸಿದಾಗ ಹುಸಿ ಕರೆ ಮಾಡಿರುವುದು ಖಚಿತವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ವೇಳೆ ಸುಮ್ಮನೆ ಝಾಕೀರ್ ಕರೆ ಮಾಡಿದ್ದು, ಗೊತ್ತಿಲ್ಲದೆ ಈ ರೀತಿ ಕರೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.