ತ್ರಿಭಾಷಾ ಸೂತ್ರದ ವಿರುದ್ಧ ಬೀದಿಗಿಳಿಯಿರಿ: ಕನ್ನಡಿಗರಿಗೆ ವಸಂತ ಶೆಟ್ಟಿ ಕರೆ
ಬೆಂಗಳೂರು, ಜು.9: ತ್ರಿಭಾಷಾ ಸೂತ್ರದ ಮೂಲಕ ಕನ್ನಡದ ಜಾಗಗಳಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಕನ್ನಡಿಗರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಕನ್ನಡಪರ ಚಿಂತಕ ವಸಂತ ಶೆಟ್ಟಿ ತಿಳಿಸಿದ್ದಾರೆ.
ರವಿವಾರ ಶ್ರೀಸಾಮಾನ್ಯರ ಕೂಟ ಹಾಗೂ ಅದಮ್ಯ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಲೇಖಕ ನರಸಿಂಹ ಶೆಟ್ಟಿರವರ ‘ತನುಜಾತೆಯ ತಲ್ಲಣಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಕನ್ನಡ ಭಾಷೆಯ ಜಾಗದಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಿದ್ದು, ಈಗ ವೆುಟ್ರೋದಲ್ಲಿ ಹಿಂದಿಯನ್ನು ಅಳವಡಿಸಲಾಗಿದೆ. ಹೀಗೆ ಹಿಂದಿ ಭಾಷೆಕರಿಗೆ ಅನುಕೂಲವಾದ ವಾತಾವರಣ ನಿರ್ಮಿಸುವ ಮೂಲಕ ಕನ್ನಡವನ್ನು ಹಂತ, ಹಂತವಾಗಿ ನಿರ್ಣಾಮ ಮಾಡುವ ಹುನ್ನಾರ ಅಡಗಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈಗಾಗಲೆ ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ನಿರ್ಣಾಮ ಮಾಡಲಾಗಿದೆ. ಕೇವಲ ಕನ್ನಡ ಭಾಷೆ ಬಲ್ಲವನೊಬ್ಬ ಬ್ಯಾಂಕ್‌ನಲ್ಲಿ ಸುಲಭವಾಗಿ ವ್ಯವಹರಿಸಲಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ನಮ್ಮ ನೆಲದಲ್ಲಿಯೇ ಕನ್ನಡಿಗನೊಬ್ಬ ಪರಕೀಯ ಭಾವನೆ ಅನುಭವಿಸುತ್ತಿರುವ ಕೇಂದ್ರ ಸರಕಾರದ ಕನ್ನಡ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ದಕ್ಷಿಣ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಅಳಿವು-ಉಳಿವಿನ ಪ್ರಶ್ನೆಯಾಗಿದೆ. ನಮ್ಮ ರಾಜ್ಯಗಳ ಜನಸಂಖ್ಯಾ ಅನುಪಾತವು ಇಳಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದ ಜನಸಂಖ್ಯಾ ಅನುಪಾತವು ನಿಗಧಿಗಿಂತ ಹೆಚ್ಚಾಗಿದೆ. ಈ ಜನಸಂಖ್ಯಾ ಅಸಮತೋಲನ ಸರಿಯಾಗದಿದ್ದರೆ ಕನ್ನಡ, ತಮಿಳು, ತೆಲಗು, ಮಲಯಾಳಿ ಭಾಷಿಕರು ತಮ್ಮ ನೆಲದಲ್ಲಿಯೇ ಭಾಷಾ ಅಲ್ಪಸಂಖ್ಯಾತರಾಗಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ, ಸಚಿವಾಲಯ ನೌಕರರ ಸಹಕಾರ ಸಂಘದ ಅಧ್ಯಕ್ಷ ಯು.ಡಿ.ನರಸಿಂಹಯ್ಯ, ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರದೇ.ಪಾರ್ಶ್ವನಾಥ, ಅದಮ್ಯ ಪ್ರಕಾಶನದ ಎಸ್.ವಿಜಯಕುಮಾರ್ ಹಾಗೂ ಕೃತಿಕಾರ ನರಸಿಂಹ ಶೆಟ್ಟಿ ಉಪಸ್ಥಿತರಿದ್ದರು.