12 ಕೋಟಿ ಜಿಯೊ ಗ್ರಾಹಕರ ಮಾಹಿತಿ ಲೀಕ್!

Update: 2017-07-10 03:51 GMT

ಹೊಸದಿಲ್ಲಿ, ಜು. 10: ದೇಶದ 120 ದಶಲಕ್ಷ ರಿಲಯನ್ಸ್ ಜಿಯೊ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿದ್ದು, ಈ ಘಟನೆ ದೇಶದಲ್ಲಿ ವೈಯಕ್ತಿಕ ಮಾಹಿತಿಗಳ ಗೌಪ್ಯತೆ ಬಗ್ಗೆ ಅತಂಕ ಹುಟ್ಟುಹಾಕಿದೆ.

ಮ್ಯಾಜಿಕಾಪಿಕೆ ಎಂಬ ವೆಬ್‌ಸೈಟ್, 12 ಕೋಟಿ ಜಿಯೊ ಗ್ರಾಹಕರ ಮಾಹಿತಿಯನ್ನು ಪಡೆದಿದೆ ಎನ್ನಲಾಗಿದ್ದು, ವೆಬ್‌ಸೈಟ್‌ನಲ್ಲಿ ಗ್ರಾಹಕರ ಮೊದಲ ಹೆಸರು, ಕೊನೆಯ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಸರ್ಕಲ್, ಸಿಮ್ ಆಕ್ಟಿವೇಟ್ ಆದ ದಿನಾಂಕ ಮಾತ್ರವಲ್ಲದೇ ಆಧಾರ್ ಸಂಖ್ಯೆಗಳೂ ಲಭ್ಯ ಇವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಗ್ರಾಹಕರ ಸಿಮ್‌ಕಾರ್ಡ್ ಆಕ್ಟಿವೇಟ್ ಮಾಡಲು ಆಧಾರ್ ಐಡಿ ಪಡೆಯುತ್ತಿರುವ ಕೆಲವೇ ದೂರಸಂಪರ್ಕ ಸೇವಾ ಸಂಸ್ಥೆಗಳಲ್ಲಿ ಜಿಯೊ ಕೂಡಾ ಒಂದಾಗಿದೆ. 2017ರ ಫೆಬ್ರವರಿಯಲ್ಲಿ ರಿಲಯನ್ಸ್ ಜಿಯೊ 100 ದಶಲಕ್ಷ ಗ್ರಾಹಕರನ್ನು ತಲುಪಿತ್ತು. ಕಂಪನಿಯ ಗ್ರಾಹಕ ಮಾಹಿತಿ ಸಂಪೂರ್ಣವಾಗಿ ಸೋರಿಕೆಯಾಗಿದ್ದರೆ, ಇದು ದೇಶದ ಅತಿದೊಡ್ಡ ಮಾಹಿತಿ ಸೋರಿಕೆ ಎನಿಸಿಕೊಳ್ಳಲಿದೆ.

ಫೋನ್‌ಅರೇನಾ ಎಂಬ ವೆಬ್‌ಸೈಟ್ ಮೊಟ್ಟಮೊದಲ ಬಾರಿಗೆ ಈ ಸೋರಿಕೆಯನ್ನು ಪತ್ತೆ ಮಾಡಿದ್ದು, "ನನ್ನ ಹಾಗೂ ನಮ್ಮ ತಂಡದ ಕೆಲ ಸದಸ್ಯರ ವೈಯಕ್ತಿಕ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ನೋಡಿ ಆಘಾತವಾಯಿತು" ಎಂದು ಸಂಪಾದಕ ವರುಣ್ ಕ್ರಿಶ್ ಹೇಳಿದ್ದಾರೆ. ವೆಬ್‌ಸೈಟ್‌ನ ಸರ್ಚ್ ಬಾಕ್ಸ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ದಾಖಲಿಸಿದರೆ, ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ ಎಂದು ಅವರು ಹೇಳಿದ್ದಾರೆ. ಜಿಯೊ ಸೇವೆಯ ಪ್ರಿವ್ಯೆ ಆಫರ್ ಪಡೆದ ಬಹುತೇಕ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿವೆ ಎಂದು ವೆಬ್‌ಸೈಟ್ ಹೇಳಿದೆ.

ಈ ಬಗ್ಗೆ ಜಿಯೋ ವಕ್ತಾರರನ್ನು ಸಂಪರ್ಕಿಸಿದಾಗ, "ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಗ್ರಾಹಕರ ಅನುಮತಿ ಇಲ್ಲದೇ ಯಾವ ಮಾಹಿತಿಯನ್ನೂ ಬಹಿರಂಗಪಡಿಸಲಾಗದು. ಹಾಗೂ ವೆಬ್‌ಸೈಟ್ ನೀಡಿರುವ ಮಾಹಿತಿಗಳು ಅಧಿಕೃತವಲ್ಲ" ಎಂದು ಪ್ರತಿಕ್ರಿಯಿಸಿದರು.

ರಾತ್ರಿ 11.40ರ ವೇಳೆಗೆ ಸಾಕಷ್ಟು ಕರೆಗಳು ಬರಲಾರಂಭಿಸಿದ್ದು, ಮಾಹಿತಿ ನೀಡಿದ ವೆಬ್‌ಸೈಟ್ ಆಫ್‌ಲೈನ್ ಆಗಿದೆ. ರಾತ್ರಿ 12.45ರ ಬಳಿಕ ಇದನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News