ಫೇಸ್ಬುಕ್ ನಲ್ಲಿ ಪ್ರಚೋದನಕಾರಿ ಪೋಸ್ಟ್: ಭಾರತೀಯನನ್ನು ಕೆಲಸದಿಂದ ಕಿತ್ತೆಸೆದ ಕುವೈತ್ ಕಂಪೆನಿ

Update: 2017-07-11 08:46 GMT

ಕುವೈತ್, ಜು.11: ಫೇಸ್ಬುಕ್ ನಲ್ಲಿ ಮುಸ್ಲಿಮರನ್ನು ನಿಂದಿಸಿ, ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಭಾರತೀಯನೋರ್ವನನ್ನು ಇಲ್ಲಿನ ಕಂಪೆನಿಯೊಂದು ಕೆಲಸದಿಂದ ತೆಗೆದುಹಾಕಿದೆ. ಈ ಬಗ್ಗೆ ಕಂಪೆನಿ ಇ-ಮೇಲ್ ಮೂಲಕ ಸ್ಪಷ್ಟಪಡಿಸಿದೆ.

“ಮುಸ್ಲಿಮರ ಅಂಗಡಿಗಳಿಂದ ಅಗತ್ಯ ವಸ್ತುಗಳ ಖರೀದಿಯನ್ನು ಹಿಂದೂಗಳು ನಿಲ್ಲಿಸಬೇಕು. ಮುಸ್ಲಿಮರು ಪ್ರಮುಖವಾಗಿ ವ್ಯಾಪಾರ ನಡೆಸುವ ಪ್ರತಿಯೊಂದು ಕಾಲನಿಯಲ್ಲೂ ಇಂತಹ ಬಹಿಷ್ಕಾರಕ್ಕೆ ಹಿಂದೂಗಳು ಪ್ರಚಾರ ಮಾಡಬೇಕು. ಪಶ್ಚಿಮ ಬಂಗಾಳದ ಸರಕಾರ ಹಿಂದೂಗಳ ಪರ ಇರುವ ಸರಕಾರವಲ್ಲ. ಅದು ಮುಸ್ಲಿಮರಿಗಾಗಿ ಇರುವ ಸರಕಾರ. ಇನ್ನೊಂದು ಬಾರಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗೋಧ್ರಾದಂತಹ ಇನ್ನೊಂದು ಗಲಭೆ ನಡೆಸಬಹುದು. ಅಷ್ಟರವರೆಗೆ ಈ ಬಹಿಷ್ಕಾರ ನಡೆಯಬೇಕು" ಎಂದು ಮುಖೇಶ್ ಕುಮಾರ್ ಎಂಬಾರ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಿಲಿ ಗೆಝೆಟ್ ಹಾಗೂ ಐರನಿ ಆಫ್ ಇಂಡಿಯಾ ಇದನ್ನು ಶೇರ್ ಮಾಡಿತ್ತು. ಈ ಬಗ್ಗೆ ಭಾರತೀಯರು ಹಾಗೂ ವಿದೇಶಗಳಲ್ಲಿರುವ ಭಾರತೀಯರು ಹಾಗೂ ಅನಿವಾಸಿ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಇ-ಮೇಲ್ ಮೂಲಕ ಕುಮಾರ್ ನನ್ನು ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಅಲ್-ಲೆವಾ ಕಂಪೆನಿ ಸ್ಪಷ್ಟಪಡಿಸಿದ್ದು, ಎಚ್ಚರಿಕೆ ನೀಡುವ ಮೂಲಕ ತಕ್ಷಣದಿಂದ ಈ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News