ರಾಷ್ಟ್ರಪತಿ ಚುನಾವಣೆ : ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
Update: 2017-07-11 20:02 IST
ಬೆಂಗಳೂರು, ಜು.11: ರಾಷ್ಟ್ರಪತಿ ಚುನಾವಣೆಯು ಜು.17ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಎಲ್ಲ ಶಾಸಕರು ಕಡ್ಡಾಯವಾಗಿ ಅಂದು ವಿಧಾನಸೌಧಕ್ಕೆ ಆಗಮಿಸುವಂತೆ ವಿಪ್ ಜಾರಿಗೊಳಿಸಿದೆ.
ಶಾಸಕಾಂಗ ಪಕ್ಷದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಎಲ್ಲ ಶಾಸಕರು, ಸಂಸದರಿಗೆ ಸರಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ್ ಮೂಲಕ ಸೂಚನೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದ ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಲೋಕಸಭೆಯ ಮಾಜಿ ಸ್ಪೀಕರ್ ಡಾ.ಮೀರಾಕುಮಾರ್ ಪರವಾಗಿ ಕಾಂಗ್ರೆಸ್‌ನ ಎಲ್ಲ ಶಾಸಕರು, ಸಂಸದರು ಮತ ಚಲಾಯಿಸುವಂತೆ ಈಗಾಗಲೆ ಸೂಚಿಸಲಾಗಿದೆ.
ಅದರಂತೆ, ಜು.17ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆ ನಡೆಯಲಿದೆ. ಆನಂತರ, ಎಲ್ಲ ಶಾಸಕರು ವಿಧಾನಸೌಧದಲ್ಲಿ ಸಿದ್ಧಪಡಿಸಲಾಗಿರುವ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.