×
Ad

ಕರೀಂಲಾಲ್ ತೆಲಗಿ ಸೇರಿ ಮೂವರ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್

Update: 2017-07-11 21:08 IST

ಬೆಂಗಳೂರು, ಜು.11: ಅನಾರೋಗ್ಯ ಸಂಬಂಧ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿದ ನಕಲಿ ಛಾಪಾಕಾಗದ ಪ್ರಕರಣದ ಆರೋಪಿ ಕರೀಂಲಾಲ್ ತೆಲಗಿ ಹಾಗೂ ಜಾಮೀನು ಕೊಡಿಸಲು ಸಹಕರಿಸಿದ ಇಬ್ಬರು ವೈದ್ಯಾಧಿಕಾರಿಗಳನ್ನು ಬಿಡುಗಡೆಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಮೂವರು ಆರೋಪಿಗಳು ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗಿಯ ನ್ಯಾಯಪೀಠ ಈ ಆದೇಶ ನೀಡಿತು.
                       
ಅರ್ಜಿದಾರರ ಪರ ವಾದಿಸಿದ ವಕೀಲರು, ಕರೀಂಲಾಲ್ ತೆಲಗಿ ಅವರ ಅನಾರೋಗ್ಯದ ಸಂಬಂಧ ವೈದ್ಯರುಗಳಾದ ಕೆ.ಎಚ್.ಜ್ಞಾನೇಂದ್ರಪ್ಪ ಹಾಗೂ ಕೆ.ಎಂ.ಚನ್ನಕೇಶವ ಅವರು ಕರೀಂಲಾಲ್ ತೆಲಗಿಗೆ ಯಾವುದೆ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿಲ್ಲ. ಹಾಗೂ ಈ ಪ್ರಮಾಣ ಪತ್ರವನ್ನು ನೀಡಿರುವ ಬಗ್ಗೆ ಯಾವುದೇ ಮಾಹಿತಿಯಾಗಲಿ, ದುಡ್ಡು ತೆಗೆದುಕೊಂಡಿರುವ ಬಗ್ಗೆ ಯಾವುದೇ ಸಾಕ್ಷಿಗಳಾಗಲಿ ಇಲ್ಲ ಎಂದು ಪೀಠಕ್ಕೆ ತಿಳಿಸಿದರು. ಈ ಮೂವರು ಆರೋಪಿಗಳಿಗೆ ಕೆಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ವೈದ್ಯರಿಗೆ ತಲಾ 5 ಲಕ್ಷ ರೂ.ದಂಡ ಹಾಗೂ ತೆಲಗಿಗೆ 25 ಲಕ್ಷ ರೂ.ದಂಡ ವಿಧಿಸಿದೆ. ಹೀಗಾಗಿ, ಈ ಆದೇಶವನ್ನು ರದ್ದುಪಡಿಸಿ ಬಿಡುಗಡೆಗೆ ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ತೆಲಗಿ ಹಾಗೂ ಇಬ್ಬರು ವೈದ್ಯಾಧಿಕಾರಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News