×
Ad

ದೊರೆಸ್ವಾಮಿಗೆ ಎಂ.ಪಿ.ಪ್ರಕಾಶ್ ರಾಷ್ಟ್ರೀಯ ಸೇವಾಸಿರಿ ಪ್ರಶಸ್ತಿ

Update: 2017-07-11 21:37 IST

ಬೆಂಗಳೂರು, ಜು. 11: ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಎಂ.ಪಿ. ಪ್ರಕಾಶ್ ರಾಜಕಾರಣದಲ್ಲಿ ಅಲ್ಲದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ರಾಜ್ಯ ರಾಜಕಾರಣದಲ್ಲಿ ಅವರು ಮ್ಯಾನ್ ಆಫ್ ಪರ್ಫೆಕ್ಷನ್ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಣ್ಣಿಸಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 77ನೆ ಜನ್ಮ ದಿನಾಚರಣೆ ಅಂಗವಾಗಿ ಎಂ.ಪಿ.ಪ್ರಕಾಶ್ ಪ್ರತಿಷ್ಠಾನ, ರಂಗಭಾರತಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಂ.ಪಿ.ಪ್ರಕಾಶ್ ರಾಷ್ಟ್ರೀಯ ಸೇವಾಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಎಂ.ಪಿ.ಪ್ರಕಾಶ್ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅವರ ಆದರ್ಶಗಳನ್ನು ಇಂದಿನ ಯುವ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು. ರಾಜಕೀಯ ಕ್ಷೇತ್ರವಲ್ಲದೆ ಸಾಂಸ್ಕೃತಿಕ ರಂಗದಲ್ಲೂ ಗುರುತಿಸಿಕೊಂಡಾಗ ಮಾತ್ರ ಆದರ್ಶ ರಾಜಕಾರಣಿಗಳು ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ ಬಂದು 70 ವರ್ಷಗಳೆ ಕಳೆದರೂ ದೇಶದಲ್ಲಿ ಇನ್ನೂ ಬಡತನ ನಿರ್ಮೂಲನೆ ಆಗಿಲ್ಲ. ಭೂರಹಿತರಿಗೆ ಭೂಮಿಯನ್ನು ಹಂಚಬೇಕು ಎಂದು ಎಂ.ಪಿ.ಪ್ರಕಾಶ್ ಅವರು ಹೋರಾಟ ನಡೆಸಿದ್ದರು. ದುಡಿಯುವುದಕ್ಕಾಗಿ ಮಾತ್ರ ಎಂಬ ಷರತ್ತಿನ ಮೇಲೆ ಬಡವರಿಗೆ ಭೂಮಿಯನ್ನು ನೀಡಬೇಕು. ಇದರಿಂದ ಬಡವರು, ದಲಿತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ಎಂ.ಪಿ.ಪ್ರಕಾಶ್ ನನಗಿಂತ 22 ವರ್ಷ ಚಿಕ್ಕವರು. ಇವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ದುಃಖ, ಇನ್ನೊಂದು ಕಡೆ ಒಡನಾಡಿ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಸಂತೋಷ ಆಗುತ್ತಿದೆ ಎಂದು ಭಾವುಕರಾದರು.
ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಟಗಾರರನ್ನು ನೋಡಲು, ಅವರ ಜೊತೆ ಗುರುತಿಸಿಕೊಳ್ಳಲು ಮಾತ್ರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದೆ. ಸ್ವಾತಂತ್ರ ಹೋರಾಟಗಾರನಾಗಬೇಕು ಎಂದು ನಾನು ಎಂದಿಗೂ ಅಂದುಕೊಂಡಿದ್ದಿಲ್ಲ. ನನಗೆ 97 ವರ್ಷಗಳು ಆಗುವವರೆಗೂ ಇದು ನನ್ನ ಅರಿವಿಗೂ ಬರಲಿಲ್ಲ. ಕಳೆದ ಎರಡು ವರ್ಷದ ಹಿಂದೆ ಮಂಡೂರಿನಲ್ಲಿ ಸುರಿಯುತ್ತಿದ್ದ ಬೆಂಗಳೂರಿನ ಕಸ ವಿಲೇವಾರಿ ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಸಿಕ್ಕ ಗೆಲುವು ನಾನೊಬ್ಬ ಹೋರಾಟಗಾರ ಎಂಬ ಅರಿವು ನನ್ನಲ್ಲಿ ಮೂಡಿಸಿತು ಎಂದು ಸ್ಮರಿಸಿಕೊಂಡರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಇಂದಿನ ಯುವ ರಾಜಕಾರಣಿಗಳು ಎಂಪಿ.ಪ್ರಕಾಶ್ ಅವರ ಹಾದಿಯಲ್ಲಿ ಸಾಗುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ ಅವರಿಗೆ ಎಂ.ಪಿ.ಪ್ರಕಾಶ್ ಸಾಹಿತ್ಯ ಸೇವಾ ಸಿರಿ ಪ್ರಶಸ್ತಿ, ಸಾಮರ್ಥ್ಯ ವಿಕಲಚೇತನ ಪುನಶ್ಚೇತನ ಸೇವಾ ಸಂಸ್ಥೆಗೆ ಮ.ಮ. ಪಾಟೀಲ ಜನಸೇವಕ ಪ್ರಶಸ್ತಿ, ನಟಿ ಗಿರಿಜಾ ಲೋಕೇಶ್‌ಗೆ ಎಂ.ಪಿ.ಕೊಟ್ರಗೌಡ ಕಲಾರಾಧಕ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಪ್ರಶಸ್ತಿಗಳು ಫಲಕ, ತಲಾ ಒಂದು ಲಕ್ಷ ರೂ. ನಗದು ಒಳಗೊಂಡಿವೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಶಾಸಕ ಎಂ.ಪಿ.ರವೀಂದ್ರ, ಮಾಜಿ ಸಚಿವ ಅಮರೇಗೌಡ ಬೈಯಾಪುರ, ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮಿ, ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News