×
Ad

ಕ್ಯಾಂಟರ್-ಕಾರು ಢಿಕ್ಕಿ: ಐವರ ಮೃತ್ಯು

Update: 2017-07-11 22:05 IST

ರಾಮನಗರ, ಜು.11: ಕ್ಯಾಂಟರ್ ಹಾಗೂ ಕಾರು ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಅನಿಲ್‌ಕುಮಾರ್, ಸಂತೋಷ್, ಚಂದ್ರು, ರಾಜು ಸೇರಿ ಐವರು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿಯ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಹಾಲಿನ ಕ್ಯಾಂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಕ್ಯಾಂಟರ್ ಚಾಲಕನಿಗೂ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಶವವನ್ನು ಜೆಸಿಬಿ ಮೂಲಕ ಹೊರತರಲಾಯಿತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತರೆಲ್ಲರೂ ಕನಕಪುರದ ಸಾತನೂರು ಬಳಿಯ ಕಬ್ಬಾಳು ದೇವಸ್ಥಾನಕ್ಕೆ ಹೋಗಿದ್ದವರು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕನಕಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News