×
Ad

ವಿಶೇಷ ನೇಮಕಾತಿ ನಿಯಮಗಳಿಗೆ ಸಚಿವ ಸಂಪುಟದ ಅನುಮೋದನೆ: ಟಿ.ಬಿ.ಜಯಚಂದ್ರ

Update: 2017-07-12 22:02 IST

ಬೆಂಗಳೂರು, ಜು.12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ 11 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ತಿಳಿಸಿದರು.

ಜೊತೆಗೆ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನವನ್ನು ಅವರ ಖಾತೆಗಳಿಗೆ ಪಾವತಿ ಮಾಡಲೂ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಖಾಯಂಗೊಂಡ ಪ್ರತಿ ಪೌರಕಾರ್ಮಿಕರಿಗೆ 25 ಸಾವಿರ ರೂ.ಹಾಗೂ ನೇರವಾಗಿ ಹೊರಗುತ್ತಿಗೆಯ ಮೇರೆಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸಿಕ 17 ಸಾವಿರ ರೂ.ಗಳಂತೆ ಮಾಸಿಕ ಸಂಭಾವನೆಯನ್ನು ಸಂಬಂಧಿತರ ಖಾತೆಗೆ ನೇರವಾಗಿ ಪಾವತಿಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ ಸುಮಾರು 336 ಕೋಟಿ ರೂ. ಹೊರೆ ಬೀಳಲಿದೆ. ಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಖಾಯಮಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಜಯಚಂದ್ರ ತಿಳಿಸಿದರು.

ಲೋಕಾಯುಕ್ತ ಎಸ್‌ಐಟಿಗೆ ಹಸ್ತಾಂತರ: ಅಕ್ರಮ ಗಣಿಗಾರಿಕೆಯ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಯಿಂದ ವಿಶೇಷ ತನಿಖಾ ತಂಡಕ್ಕೆ ವಹಿಸಲು ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. ಇದೀಗ ವಿವಿಧ ನ್ಯಾಯಾಲಯಗಳಲ್ಲಿದ್ದ 7 ಪ್ರಕರಣಗಳನ್ನೂ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವ ಮೂಲಕ ಲೋಕಾಯುಕ್ತ 1 ಮತ್ತು 2 ವರದಿಯ ಎಲ್ಲ ಪ್ರಕರಣಗಳು ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆಗೆ ಒಳಪಡಿಸಲು ಸಮ್ಮತಿಸಲಾಗಿದೆ ಎಂದು ಅವರು ಹೇಳಿದರು.

ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ: ರಾಜ್ಯದ ಪೊಲೀಸ್ ಇಲಾಖೆಯ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರಿಗೆ ‘ನಿವೃತ್ತ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಯೋಜನೆ’ಗೆ 20 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಜಯಚಂದ್ರ ತಿಳಿಸಿದರು.

ವೆನ್‌ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ: ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ 100 ಹಾಸಿಗೆಯುಳ್ಳ ಜನರಲ್ ಮೆಡಿಸನ್ ಸೂಪರ್ ಸ್ಪೆಷಾಲಿಟಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಯ 10 ಕೋಟಿ ರೂ.ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ನ್ಯಾಯಾಲಯ ಸಂಕೀರ್ಣ: ಬಳ್ಳಾರಿ ನಗರದ ಪಾರ್ವತಿನಗರ ಬಡಾವಣೆಯಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಷ್ಕೃತ ಅಂದಾಜು 75.42 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ವಿಧಾನ ಪರಿಷತ್ತಿನ ಸೃಜನೆ, ರದ್ಧತಿ ಮತ್ತು ರಚನೆಯ ಕುರಿತಂತೆ ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸ್ಸಿಗೆ ಬದಲಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿರುವ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತುದಾರರಿಂದ ವಸೂಲು ಮಾಡಿರುವ 35.83 ಕೋಟಿ ರೂ.ಬೋಧನಾ ಶುಲ್ಕವನ್ನು ಸರಕಾರಕ್ಕೆ ಜಮೆ ಮಾಡುವ ಬದಲು ಸಂಸ್ಥೆಗಳಲ್ಲಿಯೆ ಉಳಿಸಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜಮಖಂಡಿ ಗ್ರಾಮದ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೊಂಗಳಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಚುಲ್ಕಿ ನಾಲಾ ಜಲಾಶಯ ಮತ್ತು ಬಸವ ಕಲ್ಯಾಣ ತಾಲೂಕಿನ 15 ಕೆರೆಗಳನ್ನು ತುಂಬಿಸುವ 188 ಕೋಟಿ ರೂ. ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ರಾಣಿಬೆನ್ನೂರು ದೊಡ್ಡಕೆರೆ ಹಾಗೂ ಸುತ್ತಮುತ್ತಲಿನ ಮೂರು ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಬಿಸುವ 31 ಕೋಟಿ ರೂ.ಅಂದಾಜು ಮೊತ್ತದ ಯೋಜನೆಗೆ ಸಂಪುಟವು ಆಡಳಿತಾತ್ಮಕ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಹೇಳಿದರು.

ಇ-ಆಸ್ಪತ್ರೆ ಯೋಜನೆ: ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇರುವ ಆಸ್ಪತ್ರೆಗಳನ್ನು ಇ-ಆಸ್ಪತ್ರೆ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡುವ ಹಾಗೂ ಆನ್‌ಲೈನ್ ಮೂಲಕ ಮಾಹಿತಿಯನ್ನು ವಿನಿಮಯ ಮಾಡುವ ಯೋಜನೆಗೆ ರಾಜ್ಯ ಸರಕಾರ 9.65 ಕೋಟಿ ರೂ.ವೆಚ್ಚ ಮಾಡಲು ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.

ಅಲ್ಲದೆ, ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ರೋಗ ಪತ್ತೆ ಹಚ್ಚುವ ಡಯಾಗ್ನೋಸ್ಟಿಕ್ ಉಪಕರಣಗಳನ್ನು ಖರೀದಿಸಲು ತಗಲುವ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಸರಕಾರ ಪಾವತಿಸಲು ಮುಂದಾಗಿದೆ. ಈ ಕ್ರಮಕ್ಕೆ ಸಂಪುಟ ಸಮ್ಮತಿಸಿದೆ ಎಂದು ಅವರು ತಿಳಿಸಿದರು.

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ರಾಯಚೂರು, ಕೊಪ್ಪಳ, ವಿಜಯಪುರ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲಾ 25 ಕೋಟಿ ರೂ.ನಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನಿವಾಸ ಪ್ರಥಮ ದರ್ಜೆ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಮಾಡಲು ಒಟ್ಟಾರೆ 250 ಕೋಟಿ ರೂ.ವೆಚ್ಚ ಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಯಚಂದ್ರ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News