ಮಹಿಳೆಯರ ವಿಶ್ವಕಪ್: ಆಸ್ಟ್ರೇಲಿಯಕ್ಕೆ ಜಯ

Update: 2017-07-12 18:37 GMT

ಬ್ರಿಸ್ಟಲ್, ಜು.12: ಆರಂಭಿಕ ಆಟಗಾರ್ತಿ ಪೂನಂ ರಾವತ್‌ರ ಹೋರಾಟಕಾರಿ ಶತಕ ಹಾಗೂ ನಾಯಕಿ ಮಿಥಾಲಿ ರಾಜ್‌ರ ಆಕರ್ಷಕ ಅರ್ಧಶತಕದ ಕೊಡುಗೆಯ ಹೊರತಾಗಿಯೂ ಭಾರತ ತಂಡ ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸೋಲುಂಡಿದೆ. 8 ಅಂಕ ಗಳಿಸಿ 4ನೆ ಸ್ಥಾನದಲ್ಲಿರುವ ಮಿಥಾಲಿರಾಜ್ ಪಡೆ ಸೆಮಿ ಫೈನಲ್‌ಗೆ ತಲುಪಬೇಕಾದರೆ ನ್ಯೂಝಲೆಂಡ್ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

    ಕೌಂಟಿ ಗ್ರೌಂಡ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ್ದ ಆಸ್ಟ್ರೇಲಿಯ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತ 7 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು ಸುಲಭ ರನ್ ಗುರಿ ಪಡೆದ ಆಸ್ಟ್ರೇಲಿಯ ತಂಡ ಅಗ್ರ ಕ್ರಮಾಂಕದ ಆಟಗಾರ್ತಿಯರಾದ ನಾಯಕಿ ಮೆಗ್ ಲ್ಯಾನ್ನಿಂಗ್(ಅಜೇಯ 76, 88 ಎಸೆತ) ಹಾಗೂ ಎಲ್ಲಿಸ್ ಪೆರ್ರಿ(ಅಜೇಯ 60,67ಎಸೆತ)3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ್ದ 124 ರನ್ ನೆರವಿನಿಂದ 45.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 227 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಮೊದಲವಿಕೆಟ್‌ಗೆ 62 ರನ್ ಗಳಿಸಿದ ಬೋಲ್ಟನ್(36) ಹಾಗೂ ಮೂನಿ(45) ಆಸೀಸ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಭಾರತ 226: ಇದಕ್ಕೆ ಮೊದಲು ಭಾರತ 9 ರನ್‌ಗೆ ಮೊದಲ ವಿಕೆಟ್‌ನ್ನು ಕಳೆದುಕೊಂಡಿತ್ತು. ಆಗ ಜೊತೆಯಾದ ರಾವತ್(106 ರನ್, 136 ಎಸೆತ, 11 ಬೌಂಡರಿ) ಹಾಗೂ ಮಿಥಾಲಿ(69 ರನ್, 114 ಎಸೆತ, 4 ಬೌಂಡರಿ, 1 ಸಿಕ್ಸರ್) ಎರಡನೆ ವಿಕೆಟ್‌ಗೆ 157 ರನ್ ಗಳಿಸಿ ತಂಡವನ್ನು ಆಧರಿಸಿದರು.

49ನೆ ಅರ್ಧಶತಕ ಬಾರಿಸಿದ ಮಿಥಾಲಿ 6,000 ರನ್ ಮೈಲುಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
 ಆಸೀಸ್ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪೂನಂ ತನ್ನ ಇನಿಂಗ್ಸ್‌ನಲ್ಲಿ ಒಟ್ಟು 11 ಬೌಂಡರಿ ಬಾರಿಸಿದರು. ಮಿಥಾಲಿ ಇನಿಂಗ್ಸ್‌ನಲ್ಲಿ 4 ಬೌಂಡರಿ, 1 ಸಿಕ್ಸರ್‌ಗಳಿದ್ದರೂ 69 ರನ್ ಗಳಿಸಲು 114 ಎಸೆತಗಳನ್ನು ಎದುರಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್‌ಗೆ ಒತ್ತು ನೀಡಿದ ಮಿಥಾಲಿ ಅವರು ಬೀನ್ಸ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ 6000 ರನ್ ಪೂರೈಸಿದರು.

  ಮಿಥಾಲಿ ಔಟಾದ ಬಳಿಕ ಹರ್ಮನ್‌ಪ್ರೀತ್ ಕೌರ್(23ರನ್, 22 ಎಸೆತ) ಒಂದಷ್ಟು ಹೋರಾಟ ನೀಡಿದರು. ಆದರೆ ಉಳಿದ ಆಟಗಾರ್ತಿಯರು ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಲು ವಿಫಲರಾದರು. ಆಸ್ಟ್ರೇಲಿಯ ಬೌಲರ್‌ಗಳು 226 ರನ್‌ಗೆ ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಭಾರತ: 50 ಓವರ್‌ಗಳಲ್ಲಿ 226/7
(ಪೂನಂ ರಾವತ್ 106, ಮಿಥಾಲಿ ರಾಜ್ 69, ಕೌರ್ 23, ಸ್ಚಟ್ 2-52,ಪೆರ್ರಿ 2-37)
ಆಸ್ಟೇಲಿಯ: 45.1 ಓವರ್‌ಗಳಲ್ಲಿ 227/2
(ಲ್ಯಾನ್ನಿಂಗ್ ಅಜೇಯ 76, ಪೆರ್ರಿ ಅಜೇಯ 60, ಬಾಲ್ಟನ್ 36, ಪೂನಂ 1-46)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News