×
Ad

ಎಸೆಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಶೇ.50.81ಫಲಿತಾಂಶ

Update: 2017-07-13 17:48 IST

ಬೆಂಗಳೂರು, ಜು.13: ಜೂನ್-2017ರಲ್ಲಿ ನಡೆದ ಎಸೆಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಶೇ.50.81 ಫಲಿತಾಂಶ ಬಂದಿದ್ದು, ಕಳೆದ ಆರು ವರ್ಷಗಳ ಪೂರಕ ಪರೀಕ್ಷೆಯ ಫಲಿತಾಂಶಕ್ಕಿಂತ ಉತ್ತಮವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಗುರುವಾರ ನಗರದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, 2016ರ ಪೂರಕ ಪರೀಕ್ಷೆಯಲ್ಲಿ 26.07 ಫಲಿತಾಂಶ ಬಂದಿತ್ತು. ಈ ಬಾರಿ ಶೇ.50.81ಕ್ಕೆ ಏರಿಕೆ ಆಗಿರುವುದು ಸಂತಸ ತಂದಿದೆ ಎಂದರು.
ಎಸೆಸೆಲ್ಸಿ ಪೂರಕ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾದ 2,42,951 ವಿದ್ಯಾರ್ಥಿಗಳಲ್ಲಿ 1,23,443 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಕಳೆದ ಎಪ್ರಿಲ್‌ನಲ್ಲಿ ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಬೀದರ್, ಬೆಳಗಾವಿ ಕೊನೆಯ ಸ್ಥಾನದಲ್ಲಿದ್ದವು. ಆದರೆ, ಪೂರಕ ಪರೀಕ್ಷೆಯಲ್ಲಿ ಬೆಳಗಾವಿ ಶೇ.73.19 ಉತ್ತಮ ಫಲಿತಾಂಶವನ್ನು ಪಡೆದರೆ, ಬೀದರ್ ಶೇ.52.10 ಸಾಧಾರಣ ಫಲಿತಾಂಶ ಪಡೆದಿದೆ. ಉಳಿದಂತೆ ದಕ್ಷಿಣ ಕನ್ನಡ ಶೇ.30.10, ಉಡುಪಿ ಶೇ.35.28, ಬೆಂಗಳೂರು ಉತ್ತರ ಶೇ.35.76 ಹಾಗೂ ಬೆಂಗಳೂರು ದಕ್ಷಿಣ ಶೇ.27.61ಫಲಿತಾಂಶವನ್ನು ಪಡೆದಿವೆ.

ಜು.31ರವರೆಗೆ ಪ್ರವೇಶಕ್ಕೆ ಅವಕಾಶ: ಎಸೆಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜು.31ರವರೆಗೆ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ದಂಡರಹಿತವಾಗಿ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಎಪ್ರಿಲ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಂಡ ರಹಿತ ಪ್ರವೇಶಾವಕಾಶದ ಅವಧಿ ಮುಗಿದಿದ್ದು, ಜು.31ರವರೆಗೆ ದಂಡಸಹಿತ ಪ್ರವೇಶಕ್ಕೆ ಅವಕಾಶವಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.

ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಶೀಘ್ರವೇ ಪ್ರಕಟಗೊಳ್ಳಲಿದ್ದು, ಇಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಇಟಿಯಡಿ ಕೌನ್ಸಲಿಂಗ್‌ಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News