ತೆರಿಗೆ ಇಳಿಕೆಗೆ ಆಗ್ರಹಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಬೆಂಗಳೂರು, ಜು. 13: ‘ನ್ಯಾಪ್‌ಕಿನ್’ಗಳ ಮೇಲೆ ಶೇ.12.5ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರಧಾನಿ ಮೋದಿ, ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮತಿ ಇರಾನಿ ಹಾಗೂ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವರಿಗೆ ‘ನ್ಯಾಪ್‌ಕಿನ್’ ಅನ್ನು ಅಂಚೆ ಮೂಲಕ ರವಾನಿಸಿ ಪ್ರತಿಭಟನೆ ನಡೆಸಿದರು.
ಗುರುವಾರ ಇಲ್ಲಿನ ಬಸವನಗುಡಿಯಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿನಿಯರು, ನ್ಯಾಪ್‌ಕಿನ್‌ಗಳಿಗೆ ಶೇ.12.5ರಷ್ಟು ಜಿಎಸ್ಟಿ ವಿಧಿಸಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ, ಶುಚಿತ್ವ, ಭೇಟಿ ಪಡಾವೋ-ಭೇಟಿ ಬಚಾವೋಗೆ ಆದ್ಯತೆ ನೀಡಿ, ಮಾತೃ ದೇವೋಭವ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುವ ಕೇಂದ್ರ ಸರಕಾರ ಮಹಿಳೆಯರು ಮತ್ತು ವಿದ್ಯಾರ್ಥಿಯರು ಉಪಯೋಗಿಸುವ ನ್ಯಾಪ್‌ಕಿನ್‌ಗಳನ್ನು ತೆರಿಗೆ ವ್ಯಾಪ್ತಿಗೆ ತಂದದ್ದು ಏಕೆ ಎಂದು ಮಂಜುನಾಥ್ ಪ್ರಶ್ನಿಸಿದರು.
ಶಾಲಾ-ಕಾಲೇಜು ಮಟ್ಟದಲ್ಲಿ ಉಚಿತವಾಗಿ ನೀಡಬೇಕಿದ್ದ ನ್ಯಾಪ್‌ಕಿನ್‌ಗೆ ತೆರಿಗೆ ಸರಿಯಲ್ಲ. ಆಧುನಿಕತೆ ಬದುಕಿನಲ್ಲಿ ಅದರ ಅಗತ್ಯತೆಯನ್ನು ಮನಗಾಣಬೇಕು. ನ್ಯಾಪ್‌ಕಿನ್ ಅನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಮಾರುತಿ, ಜಿತೇಂದ್ರ, ದೀಪು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.