×
Ad

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Update: 2017-07-13 18:07 IST

ಬೆಂಗಳೂರು, ಜು. 13: ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಸಾರಿಗೆ ಸಂಸ್ಥೆಗಳಲ್ಲಿನ ನೌಕರರಿಗೆ ದಿನಭತ್ತೆ, ಸಮುದಾಯ ಭವನ, ಆಸ್ಪತ್ರೆ, ಮುಂಭಡ್ತಿ ಹಾಗೂ ಮಹಿಳಾ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಪ್ರಧಾನ ಕಾರ್ಯದರ್ಶಿ ಎ.ವಿ.ಬೋರಶೆಟ್ಟಿ, ಸಾರಿಗೆ ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿಯಿಂದ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲು ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ರೀತಿಯ ಸಭೆ ನಡೆಸಲು ಸಂಸ್ಥೆಯ ಅಧಿಕಾರಿಗಳು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಹಿಂದೆ ಮುಷ್ಕರ ನಡೆಸಿದ ಸಂದರ್ಭದಲ್ಲಿ ನೌಕರರ 41 ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ. ಬಿಎಂಟಿಸಿಗೆ 2016-17 ನೆ ಸಾಲಿನಲ್ಲಿ 120 ಕೋಟಿ ತೆರಿಗೆ ಮನ್ನಾ ಮಾಡಿರುವುದು ಹಾಗೂ ಬಜೆಟ್‌ನಲ್ಲಿ 3 ಸಾವಿರ ಹೊಸ ಬಸ್‌ಗಳನ್ನು ಘೋಷಣೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ. ಆದರೆ, ಇದೇ ವೇಳೆ ಸಾರಿಗೆ ಸಂಸ್ಥೆಗಳು ಏಕಪಕ್ಷೀಯವಾಗಿ ಕೈಗೊಳ್ಳುತ್ತಿರುವ ತೀರ್ಮಾನಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
ಸಿಬ್ಬಂದಿಯ ದಿನಭತ್ತೆ ಹೆಚ್ಚಳ ಮಾಡಬೇಕು, ನೌಕರರಿಗೆ ಮುಂಭಡ್ತಿ ನೀಡಬೇಕು. ವಿವಾಹವಾದ ಸಿಬ್ಬಂದಿಗೆ ಸಂಸ್ಥೆ ವತಿಯಿಂದಲೇ ವಾಸಿಸಲು ಮನೆ ನೀಡಬೇಕು. ವಸತಿ ಗೃಹಗಳ ನಿರ್ಮಾಣ, ಮಹಿಳಾ ಕಾರ್ಮಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಸೇರಿದಂತೆ ವಿವಿಧ 41 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News