ಕೊನೆಗೂ ಸಿಕ್ಕಿಬಿದ್ದ ರೌಡಿ ಪ್ರಶಾಂತ್
ಬೆಂಗಳೂರು, ಜು.13: ಮೂತ್ರ ವಿಸರ್ಜನೆ ನೆಪ ಮಾಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ರೌಡಿ ಪ್ರಶಾಂತ್ ಮೈಸೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮೈಸೂರಿನಲ್ಲಿ ಪ್ರಶಾಂತ್ ಇರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಚ್‌ಎಎಲ್ ಮತ್ತು ಮಾರತ್‌ಹಳ್ಳಿ ಠಾಣಾ ಪೊಲೀಸರು, ಆರೋಪಿ ಪ್ರಶಾಂತ್‌ನನ್ನು ಬುಧವಾರ ಮಧ್ಯಾಹ್ನ ಮೈಸೂರಿನ ಚಾಮುಂಡಿ ರಸ್ತೆಯಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಪ್ರಶಾಂತ್‌ನನ್ನು ಬುಧವಾರ ರಾತ್ರಿಯೇ 43ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ್ ನಾಯಕ್ ಅವರ ಮುಂದೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಹಿನ್ನಲೆ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಮಾರತ್‌ಹಳ್ಳಿಯ ಮಾರುತಿನಗರದ ರೌಡಿ ಪ್ರಶಾಂತ್ ಯಾನೆ ರಾಜು(26) ಕೋಲಾರದಲ್ಲಿ ಅಡಗಿದ್ದ ಮಾಹಿತಿ ಆಧರಿಸಿ ಜು.8ರಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎಚ್‌ಎಎಲ್ ಪೊಲೀಸ್ ಇನ್ಸ್‌ಪೆಕ್ಟರ್ ಸಾದಿಕ್‌ಪಾಶ ಅವರ ನೇತೃತ್ವದ ವಿಶೇಷ ತಂಡ ಆತನನ್ನು ಬಂಧಿಸಿತ್ತು.
ಅಲ್ಲಿಂದ ಆತನನ್ನು ನಗರಕ್ಕೆ ಕರೆತಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದು ಕೆಲವು ದಿನಗಳ ಹಿಂದೆ ನಡೆದ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಈಶ್ವರಪ್ಪ ಆಪ್ತ ಸಹಾಯಕ ಅಪಹರಣ ಯತ್ನ ಪ್ರಕರಣದ ವಿಚಾರಣೆ ನಡೆಸಿದಾಗ ಆತ ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದ ಎಂದು ತಿಳಿದುಬಂದಿತ್ತು.
ಬಳಿಕ ಅಲ್ಲಿಂದ ರಾತ್ರಿ 8:30ರ ವೇಳೆ ಎಚ್‌ಎಎಲ್ ಪೊಲೀಸ್ ಠಾಣೆಗೆ ಕರೆತರುತ್ತಿದ್ದಾಗ ಕೆಆರ್ ಪುರಂನ ಐಟಿಐ ಗ್ರೌಂಡ್ ಬಳಿ ಮೂತ್ರ ವಿಸರ್ಜನೆಗೆ ಹೋಗುವ ನೆಪ ಮಾಡಿದ್ದಾನೆ. ಆತನನನ್ನು ಜೀಪಿನಿಂದ ಇಳಿಸಿ ಹಿಂದೆ ಇಬ್ಬರು ಪೇದೆಗಳನ್ನು ಕಳುಹಿಸಿದ್ದು, ಅವರ ಕಣ್ತಪ್ಪಿಸಿ ಪರಾರಿಯಾಗಿದ್ದ.