‘ಎಸ್ಕೇಪ್’ ನಾಯಕನ ಸುಲಿಗೆ ಪ್ರಕರಣ: ಯುವತಿ ಸೇರಿ ಎಂಟು ಜನರ ಬಂಧನ
ಬೆಂಗಳೂರು, ಜು. 13: ಹನಿಟ್ರಾಪ್ ಮೂಲಕ ಎಸ್ಕೇಪ್ ಚಿತ್ರದ ನಾಯಕನನ್ನು ಅಪಹರಿಸಿ, ನಗದು ದೋಚಿದ್ದ ಪ್ರಕರಣ ಸಂಬಂಧ ಯುವತಿ ಸೇರಿ ಎಂಟು ಜನರನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಎನ್‌ಆರ್ ಮೊಹಲ್ಲಾದ ದಿವ್ಯಾ (19), ಕಾಮಾಕ್ಷಿಪಾಳ್ಯದ ತಿಲಕ್ (24), ಕಡಬಗೆರೆ ಕ್ರಾಸ್‌ನ ಮಾಚೋಹಳ್ಳಿಯ ಲೋಕೇಶ್(27), ಚಿಕ್ಕಸಂದ್ರದ ಮಂಜುನಾಥ್ (21), ಹೇರೊಹಳ್ಳಿಯ ಕಿರಣ್ ಕುಮಾರ್(24), ಪುನಿತ್ (22), ಮಯೂರ ನಗರದ ಮದನ್ (22), ಸುಮಂತ್ ಸೇರಿ ಎಂಟು ಜನರು ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ನಂದಿನಿ ಬಡಾವಣೆಯ ಚಿತ್ರನಟ ಭರತ್ ಅವರನ್ನು ಆರೋಪಿ ದಿವ್ಯಾ ಪರಿಚಯ ಮಾಡಿಕೊಂಡಿದ್ದಳು. ಎರಡು ಮೂರು ಬಾರಿ ಭರತ್‌ನನ್ನು ಕರೆಸಿಕೊಂಡು ಅವರಿಂದ ಹಣ ಪಡೆದುಕೊಂಡು ಕಳುಹಿಸಿದ್ದಳು. ಜು.6 ರಂದು ಮಧ್ಯಾಹ್ನ ಮತ್ತೆ ಮೊಬೈಲ್ ಕರೆ ಮೂಲಕ ಭರತ್‌ನನ್ನು ಬಾಗಲಗುಂಟೆ ಸಿಗ್ನಲ್ ಬಳಿಗೆ ದಿವ್ಯಾ ಕರೆಸಿಕೊಂಡಿದ್ದಳು. ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದ ದಿವ್ಯಾ ಇತರ ಐವರು ಆರೋಪಿಗಳೊಂದಿಗೆ ಭರತ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು 8ನೆ ಮೈಲಿ ಸಿಗ್ನಲ್ ಮೂಲಕ ಬೆನಕಾ ಲೇಔಟ್‌ನ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು.
ಅಲ್ಲಿದ್ದ ಮೂವರು ಸೇರಿದಂತೆ ಎಲ್ಲ ಆರೋಪಿಗಳು ದಿವ್ಯಾಳ ಜತೆಗಿರುವ ಫೋಟೊಗಳನ್ನು ತೋರಿಸಿ ಭರತ್ ಮೇಲೆ ಹಲ್ಲೆ ಮಾಡಿ 15 ಸಾವಿರ ನಗದು, ನಾಲ್ಕು ಎಟಿಎಂ ಕಾರ್ಡ್‌ಗಳು, ದುಬಾರಿ ಬೆಲೆಯ ಫೋನ್‌ನನ್ನು ದೋಚಿದ್ದರು.
ಈ ಸಂಬಂಧ ಭರತ್ ನೀಡಿದ ದೂರು ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ಮೊಬೈಲ್ ಕರೆಗಳ ಮೂಲಕ ದಿವ್ಯಾಳನ್ನು ಸಂಪರ್ಕಿಸಿ ಉಳಿದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.