ಸರಕಾರಿ ಭೂ ಒತ್ತುವರಿ ತೆರವುಗೊಳಿಸಲು ಬಿಎಸ್ಪಿ ಆಗ್ರಹ
ಬೆಂಗಳೂರು, ಜು.13: ನಗರದ ಉತ್ತರ ತಾಲೂಕು ಹೆಸರುಘಟ್ಟ ಹೋಬಳಿ ಅರಕೆರೆ ಗ್ರಾಮ ಪಂಚಾಯತf ವ್ಯಾಪ್ತಿಯ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕೂಡಲೇ ಒತ್ತುವರಿ ತೆರವುಗೊಳಿಸಬೇಕೆಂದು ಬಿಎಸ್ಪಿ ಆಗ್ರಹಿಸಿದೆ.
ಗುರುವಾರ ನಗರದ ಯಲಹಂಕದ ತಹಶೀಲ್ದಾರ್ ಕಚೇರಿ ಮುಂಭಾಗ ನೂರಾರು ಬಿಎಸ್ಪಿ ಕಾರ್ಯಕರ್ತರು, ಅರಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಬೃಹತ್ ಧರಣಿ ನಡೆಸುವ ಮೂಲಕ ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ಅರಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಸಂದ್ರ, ಕಡತನಮಲೆ, ನೆಲಕುಂಟೆ, ಅಮಾನಿ ಮಾರಸಂದ್ರ, ಅರಕೆರೆ ಗ್ರಾಮಗಳಲ್ಲಿ ಪ್ರಭಾವಿಗಳು, ಬಲಾಢ್ಯರು, ಭೂಗಳ್ಳರು ನೂರಾರು ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಭೂಗಳ್ಳರಿಂದ ಸರಕಾರಿ ಭೂ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಅರಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸರಕಾರಿ ಗೋಮಾಳ, ಸ್ಮಶಾನ, ಕೆರೆ, ಶಾಲಾ ಆವರಣ ಸೇರಿ ನೂರಾರು ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಸರಕಾರಕ್ಕೆ ನೂರಾರು ಕೋಟಿ ರೂ. ನಷ್ಟವನ್ನುಂಟು ಮಾಡಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಬಂಧಿಸಿ: ಸರಕಾರಿ ಭೂಮಿ ಅಕ್ರಮವಾಗಿ ಕಬಳಿಕೆ ಮಾಡಿರುವ ಅರಕೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಟ್ಟಶಾಮಾಚಾರಿ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಿವಾಸ್ ಸೇರಿ ಕಬಳಿಕೆಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಸರಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ಅಹವಾಲು ಸ್ವೀಕಾರ: ಬೆಂಗಳೂರು ಉತ್ತರ(ಅಪರ) ತಹಶೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರೂ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ರಂಗಸ್ವಾಮಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಂಗಸ್ವಾಮಿ, ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯಲ್ಲಿನ ಸರಕಾರಿ ಭೂಕಬಳಿಕೆಯ ಕುರಿತು ಬಿಎಸ್ಪಿ ಮನವಿ ಪತ್ರ ನೀಡಿದೆ. ಇದನ್ನು ಪರಿಶೀಲಿಸಿ, ಸರಕಾರದ ಗಮನಕ್ಕೆ ತಂದು, ಮುಖಂಡರೊಡನೆ ಸಭೆ ನಡೆಸಿ ಮುಂದಿನ 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಈರಣ್ಣ ಮೌರ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತ ವಿಶ್ವನಾಥ್, ಗ್ರಾ.ಪಂ.ಸದಸ್ಯರಾದ ಎಚ್.ಪ್ರಕಾಶ್, ಮಹದೇವಯ್ಯ, ಸುಮಂಗಳ ಶ್ರೀನಿವಾಸ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
‘15 ದಿನದಲ್ಲಿ ಕ್ರಮ’
ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯಲ್ಲಿನ ಸರಕಾರಿ ಭೂಕಬಳಿಕೆಯ ಕುರಿತು ಬಿಎಸ್ಪಿ ಮನವಿ ಪತ್ರ ನೀಡಿದೆ. ಇದನ್ನು ಪರಿಶೀಲಿಸಿ, ಸರಕಾರದ ಗಮನಕ್ಕೆ ತಂದು, ಮುಖಂಡರೊಡನೆ ಸಭೆ ನಡೆಸಿ ಮುಂದಿನ 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಉಪ ವಿಭಾಗಾಧಿಕಾರಿ ರಂಗಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.