ಪರ್ವತಾರೋಹಿಗಳು ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ: ನಂದಿತಾ ನಾಗನಗೌಡರ್
ಬೆಂಗಳೂರು, ಜು.13: ದೇಶದಲ್ಲಿರುವ ಪರ್ವತಾರೋಹಿ ಕ್ರೀಡಾಪಟುಗಳು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಟ್ಟದ ಪರ್ವತಾರೋಹಿ ನಂದಿತಾ ನಾಗನಗೌಡರ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರ್ವತಾರೋಹಣವು ಜಗತ್ತಿನಲ್ಲಿಯೇ ಅತ್ಯಂತ ಸಾಹಸಮಯ ಕ್ರೀಡೆಯಾಗಿದೆ. ಹೀಗಾಗಿ ಈ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಯುವಜನತೆ ಹೆಚ್ಚಿನ ಉತ್ಸುಕರಾಗಿರುತ್ತಾರೆ. ಇಂತಹವರಿಗೆ ಸರಕಾರದ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.
ಜಗತ್ತಿನ ಏಳು ಖಂಡಗಳಲ್ಲಿರುವ ಅತ್ಯಂತ ಎತ್ತರದ ಏಳು ಪರ್ವತಗಳನ್ನು ಗುರುತಿಸಲಾಗಿದೆ. ಆ ಪರ್ವತಗಳಲ್ಲಿ ಹಿಮಾಲಯ ಹಾಗೂ ಆಸ್ಟ್ರೇಲಿಯಾದಲ್ಲಿರುವ ದಿ ಕರ್‌ಸ್ಟೇಂಝ್ ಪಿರಮಿಡ್ ಪರ್ವತಗಳನ್ನು ನಾನು ಮತ್ತು ಸತ್ಯಜಿತ್ ಸಿದ್ಧಾರ್ಥ ಹತ್ತಿದ್ದೇವೆ. ಆ ಮೂಲಕ ಕನ್ನಡಿಗರಾಗಿರುವ ನಾವಿಬ್ಬರು ದೇಶಕ್ಕೆ ಕೀರ್ತಿ ತಂದಿದ್ದೇವೆ ಎಂಬ ಹೆಮ್ಮೆಯಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಾಹಸಮಯ ಯಾತ್ರೆ: ಆಸ್ಟ್ರೇಲಿಯಾ ವ್ಯಾಪ್ತಿಯಲ್ಲಿರುವ ಕರ್‌ಸ್ಟೇಂಝ್ ಪಿರಮಿಡ್ ಹತ್ತಲು 20ದಿನಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿದ್ದೇವೆ. ಹಲವಾರು ಕಡೆಗಳಲ್ಲಿ ಕೇವಲ ಹಗ್ಗಗಳನ್ನು ಬಳಸಿಯೇ ಪರ್ವತವನ್ನು ಹತ್ತಿದ್ದೇವೆ. ಈ ವೇಳೆ ಹಲವು ಅಪಾಯಗಳಿಂದ ಪಾರಾಗಿ ಗುರಿ ಮುಟ್ಟಿದ್ದೆವು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಈ ವೇಳೆ ಪರ್ವತಾರೋಹಿ ಸತ್ಯಜಿತ್ ಸಿದ್ಧಾರ್ಥ ಉಪಸ್ಥಿತರಿದ್ದರು.