×
Ad

ಜು.15 ರಂದು ಕನ್ನಡ ಸಾಹಿತ್ಯ ಸಮ್ಮೇಳನ

Update: 2017-07-13 19:43 IST

ಬೆಂಗಳೂರು, ಜು.13: ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.15 ರಂದು ಎಚ್‌ಬಿಆರ್ ಬಡಾವಣೆಯ ಶ್ರೀ ಸಾಯಿಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ವಜ್ಞನಗರ ವಿಧಾನಸಭಾ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ, ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ.ಎಂ.ಎ.ಜಯಚಂದ್ರರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 8-30 ಕ್ಕೆ ನಾಗವಾರ ಸರ್ಕಲ್ ಮುಖ್ಯರಸ್ತೆ ಬಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಅನಂತರ ನರೇಂದ್ರ ಟಾಕೀಸ್ 80 ಅಡಿ ರಸ್ತೆ, ಬಿಡಿಎ ಸಂಕೀರ್ಣ, ಎಚ್‌ಬಿಆರ್ ಬಡಾವಣೆ ಮೂಲಕ ಜಾನಪದ ತಂಡಗಳೊಂದಿಗೆ ಮುಖ್ಯ ವೇದಿಕೆಗೆ ಕರೆ ತರಲಾಗುತ್ತದೆ ಎಂದರು. ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಧ್ವಜಾರೋಹಣ ಮಾಡಲಿದ್ದು, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಕೆ.ಜೆ.ಜಾರ್ಜ್, ಸಂಸದ ಪಿ.ಸಿ.ಮೋಹನ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನದ ಅಂಗವಾಗಿ ಕನ್ನಡ ಚಿತ್ತ ಎಲ್ಲರಿಗೂ ಹಿತ ಕುರಿತ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಇತರರು ಭಾಗವಹಿಸುತ್ತಾರೆ. ಜೊತೆಗೆ, ಚುಟುಕು ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಬಹಿರಂಗ ಅಧಿವೇಶನ ನಡೆಯಲಿದ್ದು, ಅಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News