ಜೈಲಿನಲ್ಲಿರುವ ಪ್ರಭಾವಿಗಳಿಬ್ಬರಿಗೆ ‘ಆತಿಥ್ಯ’: ಡಿಐಜಿ-ಡಿಜಿಪಿ ನಡುವೆ ವಾಕ್ಸಮರ

Update: 2017-07-13 15:56 GMT

ಬೆಂಗಳೂರು, ಜು.13: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಹಾಗೂ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ಕರೀಂಲಾಲ್ ತೆಲಗಿಗೆ ಅವರಿಂದ ಲಂಚ ಪಡೆದು ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾರಾಗೃಹಗಳ ಡಿಐಜಿ ಡಿ.ರೂಪಾ ನೀಡಿರುವ ವರದಿಯೂ, ಇದೀಗ ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.

ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ರಾಜ್ಯ ಪೊಲೀಸ್ ನಿರ್ದೇಶಕರಿಗೆ ಬರೆದಿರುವ ಪತ್ರದ ಬಗ್ಗೆ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಐಜಿ ಡಿ.ರೂಪಾ, ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಾನು ನಾಲ್ಕು ಪುಟಗಳ ವರದಿ ಕೊಟ್ಟಿದ್ದೇನೆ. ಕೊಟ್ಟಿರುವ ವರದಿಯಲ್ಲಿ ಸತ್ಯಾಂಶವಿದೆಯೋ ಇಲ್ಲವೋ ಎಂಬುದು ಡಿಜಿಪಿ ಅವರಿಗೇ ಗೊತ್ತು ಎಂದು ಹೇಳಿದರು.

ಈಗಾಗಲೇ ಒಂಭತ್ತು ಅಂಶಗಳನ್ನು ನಾನು ವರದಿಯಲ್ಲಿ ಪ್ರಸ್ತಾಪಿಸಿದ್ದು, ಅದರಲ್ಲಿ ಎಂಟು ಅಂಶಗಳಿಗೆ ಸಾಕ್ಷಿ ಇದೆ. ಇನ್ನೊಂದು ಅಂಶದ ಬಗ್ಗೆ ತನಿಖೆ ಆಗಲಿ. ಎಲ್ಲ ವಿಚಾರಗಳನ್ನು ಲಿಖಿತ ರೂಪದಲ್ಲೇ ಡಿಜಿಪಿ ಅವರಿಗೆ ನೀಡಿದ್ದೇನೆ. ಮೌಖಿಕವಾಗಿ ಯಾವುದನ್ನೂ ಹೇಳಿಲ್ಲ. ಈ ವಿಚಾರದಲ್ಲಿ ನನಗೆ ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿ ಇಲ್ಲ. ಆದರೆ, ಕಾರಾಗೃಹದಲ್ಲಿ ನಡೆಯೋ ಅಕ್ರಮಗಳ ಕುರಿತು ಡಿಜಿ ಗಮನಕ್ಕೆ ತಂದಿದ್ದೇನೆ ಎಂದು ಡಿ.ರೂಪಾ ಹೇಳಿದರು.

ಇದೇ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್.ಎನ್.ಸತ್ಯನಾರಾಯಣ್‌ರಾವ್, ನ್ಯಾಯಾಲಯದ ಆದೇಶದಂತೆಯೇ ಶಶಿಕಲಾ ಅವರಿಗೆ ಒದಗಿಸುವ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ವಿಚಾರಣಾಧೀನ ಕೈದಿಗಳು ಡ್ರಗ್ಸ್ ದಾಸರಾಗಿರುತ್ತಾರೆ. ಜೈಲಿಗೆ ಬರುವ ಮುನ್ನವೇ ಕೆಲವರು ಡ್ರಗ್ಸ್ ಸೇವಿಸಿರುತ್ತಾರೆ. ಅಂತಹವರನ್ನು ಜೈಲಿನಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೈದ್ಯಕೀಯ ವರದಿಯನ್ನೆ ಡಿಐಜಿ ರೂಪಾ ಬಹಿರಂಗಪಡಿಸಿದ್ದಾರೆ. ಈ ವಿಚಾರದಲ್ಲಿ ರೂಪಾ ಹೊಸ ಸಂಶೋಧನೆಯನ್ನೇನು ಮಾಡಿಲ್ಲವೆಂದು ಡಿಜಿಪಿ ಸತ್ಯನಾರಾಯಣರಾವ್ ಕಿಡಿಕಾರಿದ್ದಾರೆ.

 ಜೈಲಿನಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ. ಯಾವ ಆಧಾರದ ಮೇಲೆ ಡಿ.ರೂಪಾ ಈ ರೀತಿ ವರದಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದ ಅವರು, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ನನಗೆ ಯಾವುದೇ ವರದಿ ಬಂದಿಲ್ಲ. ಬುಧವಾರ ಮಾಧ್ಯಮದಲ್ಲಿ ನನ್ನ ಬಗ್ಗೆ ಕೆಲ ವಿಷಯಗಳು ಪ್ರಸಾರ ಆಗಿವೆ ಎಂದರು.

 ರೂಪಾ ವರದಿಯಲ್ಲಿ ಕಾರಾಗೃಹದಲ್ಲಿ ನಡೆದ ಕೆಲ ವಿಷಯಗಳನ್ನು ಬರೆದಿದ್ದಾರೆ. ಜೈಲಿನಲ್ಲಿನ ಗಾಂಜಾದ ಬಗ್ಗೆ ಉಲ್ಲೇಖವಾಗಿದೆ. ಇಲ್ಲಿ ಯಾವುದೇ ಹೊಸ ವಿಷಯ ಬರೆದಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ಬರದೇ ನೇರವಾಗಿ ಮಾಧ್ಯಮಗಳೆದುರು ರೂಪಾ ಹೋಗಿದ್ದಾರೆ ಎಂದು ಕಿಡಿಕಾರಿದರು.

 ರೂಪಾ ಅವರಿಗೆ ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ತಮ್ಮ ಆರೋಪಗಳಿಗೆ ರೂಪಾ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಹಿರಿಯ ಅಧಿಕಾರಿಗಳ ಜತೆ ಚರ್ಚಿಸದೇ ಮಾಧ್ಯಮಗಳಿಗೆ ವರದಿ ಕೊಟ್ಟಿದ್ದಾರೆ. ರೂಪಾ ಕೊಟ್ಟಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ. ಅವರು ಕಾರಾಗೃಹ ಕಾನೂನು ಬಗ್ಗೆ ಓದಿಕೊಂಡಿಲ್ಲ, ಹಾಗಾಗಿ ಕಾರಾಗಹದ ಬಗ್ಗೆ ರೂಪಾ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಸತ್ಯನಾರಾಯಣರಾವ್ ಹೇಳಿದರು.

ರೂಪಾ ವಿರುದ್ಧ ಕ್ರಮ: ಡಿಐಜಿ ಡಿ.ರೂಪಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನುಮತಿ ಇಲ್ಲದೇ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಸೋಮವಾರ ಮುಖ್ಯಮಂತ್ರಿ ನಡೆಸಿದ್ದ ಸಭೆಯಲ್ಲೂ ಅವರು ಭಾಗವಹಿಸಿರಲಿಲ್ಲ. ಈ ಕುರಿತು ರೂಪಾ ಅವರಿಗೆ ನೋಟೀಸ್ ನೀಡಿದ್ದೆ. ಈ ಕಾರಣಕ್ಕಾಗಿಯೇ ವರದಿ ನನಗೆ ಲಭ್ಯವಾಗುವ ಮೊದಲೇ ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಡಿಐಜಿ ಡಿ.ರೂಪಾ ಅವರು ಜೈಲಿನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ವರದಿ ಸಲ್ಲಿಸಿದರೆ, ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ಅವರು ಯಾವುದೇ ಅಕ್ರಮ ನಡೆದಿಲ್ಲ ಎಂದು ರೂಪಾ ವಿರುದ್ಧವೇ ಆರೋಪ ಮಾಡುವ ಮೂಲಕ ಮುಸುಕಿನ ಗುದ್ದಾಟ ಎತ್ತಿ ತೋರಿಸಿದೆ.

ಬೆಳಗಾವಿಯಲ್ಲಿ ಪ್ರತಿಭಟನೆ

‘ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದನ್ನು ಡಿಐಜಿ ಡಿ.ರೂಪಾ ಹಿಂದಕ್ಕೆ ಪಡೆಯಬೇಕೆಂದು ಬೆಳಗಾವಿ ಕಾರಾಗೃಹದಲ್ಲಿರುವ ಸಿಬ್ಬಂದಿ ಮತ್ತು ಕೈದಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News