×
Ad

ಒಂದು ತಿಂಗಳಲ್ಲಿ ಪ್ರತ್ಯೇಕ ನೀತಿ ರಚಿಸಿ ವರದಿ ನೀಡಲು ಹೈಕೋರ್ಟ್ ಆದೇಶ

Update: 2017-07-13 21:34 IST

ಬೆಂಗಳೂರು, ಜು.13: ರಾಜ್ಯದಲ್ಲಿ ಯೋಗ್ಯ ಆರ್‌ಟಿಐ ಕಾರ್ಯಕರ್ತರ ಅಥವಾ ಸಮಾಜದ ಸ್ವಾಸ್ಥ ನಾಶದ ಬಗ್ಗೆ ಎಚ್ಚರಿಕೆ ನೀಡುವವರ ಭದ್ರತೆ ಹಾಗೂ ರಕ್ಷಣೆಗೆ ಒಂದು ತಿಂಗಳಲ್ಲಿ ಪ್ರತ್ಯೇಕ ನೀತಿ ರಚಿಸಿ ವರದಿ ಸಲ್ಲಿಸುವಂತೆ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಗರ್ಗ್ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಯೋಗ್ಯ ಆರ್‌ಟಿಐ ಕಾರ್ಯಕರ್ತರ ರಕ್ಷಣೆಗೆ ನೀತಿ ರಚಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಗೃಹ ಇಲಾಖೆ ಉಪ ಕಾರ್ಯದರ್ಶಿ ಚಿರಂಜೀವಿ ಅವರು ಪ್ರಮಾಣಪತ್ರ ಸಲ್ಲಿಸಿ, ಹೈಕೋರ್ಟ್ ನಿರ್ದೇಶನದಂತೆ ಯೋಗ್ಯ ಆರ್‌ಟಿಐ ಕಾರ್ಯಕರ್ತರ ರಕ್ಷಣೆಗೆ ಪ್ರತ್ಯೇಕ ನೀತಿ ರಚನೆ ಮಾಡುವಂತೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದರಂತೆ 2017ರ ಜುಲೈ 12ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಅರ್ಜಿದಾರರೊಂದಿಗೆ ವಿಚಾರಣೆ ನಡೆಸಿ, ನೀತಿ ರಚಿಸಲು ನಿರ್ಧರಿಸಿದ್ದಾರೆ. ಆ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸರಕಾರದ ವಿವಿಧ ಇಲಾಖೆ ಹಾಗೂ ಜನರೊಂದಿಗೆ ಚರ್ಚಿಸಲಾಗುತ್ತಿದೆ. ಅಲ್ಲದೆ, ಮೂರು ತಿಂಗಳಲ್ಲಿ ನೀತಿ ರಚಿಸಲಾಗುವುದು ಎಂದು ಅರ್ಜಿದಾರರಿಗೆ ಹಿಂಬರಹ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಜತೆಗೆ, ನೀತಿ ರೂಪಿಸಲು ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು.

ಈ ಹೇಳಿಕೆಯನ್ನು ಒಪ್ಪದ ನ್ಯಾಯಪೀಠ, ಮೂರು ತಿಂಗಳಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಯೋಗ್ಯ ಆರ್‌ಟಿಐ ಕಾಯರ್ಕತರ ರಕ್ಷಣೆಗೆ ನೀತಿ ರೂಪಿಸುವಂತೆ ಹೈಕೋರ್ಟ್ 2017ರ ಫೆ.13ರಂದು ನಿರ್ದೇಶಿಸಿತ್ತು. ಆ ಸಂಬಂಧ ಅರ್ಜಿದಾರರು ಫೆ.17ರಂದು ಮನವಿಪತ್ರ ಸಲ್ಲಿಸಿದ್ದಾರೆ. ಅದರಂತೆ ಮೇ 17ಕ್ಕೆ ಮೂರು ತಿಂಗಳು ಪೂರ್ಣಗೊಂಡಿದೆ. ಇದೀಗ ಮತ್ತೆ ಮೂರು ತಿಂಗಳ ಕಾಲಾವಕಾಶ ಕೋರಿರುವುದು ಸರಿಯಿಲ್ಲ. ಹೀಗಾಗಿ, ಸಮಾಜದ ಹಿತಾಸಕ್ತಿ ಮತ್ತು ಅರ್ಜಿದಾರರಿಗೆ ನೀಡಿರುವ ಕೊಟ್ಟ ಮಾತು ಉಳಿಸಿಕೊಳ್ಳಲು ನಾಲ್ಕು ವಾರಗಳಲ್ಲಿ ನೀತಿ ರೂಪಿಸಿ ವರದಿ ಸಲ್ಲಿಸಬೇಕು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಗರ್ಗ್ ಅವರಿಗೆ ತಾಕೀತು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News