ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ
ರಾಯಚೂರು, ಜು.12: ರಾಜ್ಯ ಸರಕಾರದ ನಾಲ್ಕು ವರ್ಷಗಳ ಸಾಧನೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಏನು ಮಾಡಿದೆ ಎಂಬುದರ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.
ಗುರುವಾರ ಲಿಂಗಸುಗೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಏನು ಮಾಡಿಲ್ಲ ಎಂದು ಪದೇ ಪದೇ ಯಡಿಯೂರಪ್ಪ ಆರೋಪಿಸುತ್ತಿದ್ದಾರೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ನರೇಂದ್ರಮೋದಿ ಸರಕಾರ ಜನತೆಗೆ ಏನು ಆಶ್ವಾಸನೆ ನೀಡಿತ್ತು, ಏನು ಈಡೇರಿಸಿದೆ. ನಮ್ಮ ಸರಕಾರ ಕಳೆದ ನಾಲ್ಕು ವರ್ಷ ಎರಡು ತಿಂಗಳಲ್ಲಿ ರಾಜ್ಯದ ಜನತೆಗೆ ಏನು ಆಶ್ವಾಸನೆ ನೀಡಿದ್ದೆವು, ಏನು ಈಡೇರಿಸಿದ್ದೇವೆ ಎಂಬುದರ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದರು.
ಬಿಎಸ್‌ವೈ-ಶೋಭಾ ‘ತಾಳ-ಮೇಳ’: ನಮ್ಮ ಕಾರ್ಯಕ್ರಮಗಳು, ಯೋಜನೆಗಳ ಕುರಿತು ಚರ್ಚೆಗೆ ಸಿದ್ಧ ಎಂದು ಯಡಿಯೂರಪ್ಪಗೆ ಪಂಥಾಹ್ವಾನ ನೀಡಿದ್ದೇನೆ. ಆದರೆ, ಈವರೆಗೆ ಯಾಕೋ ಚರ್ಚೆಗೆ ಬರಲು ಅವರು ಸಿದ್ಧರಾಗಿಲ್ಲ. ಸರಕಾರದ ವಿರುದ್ಧ ಯಡಿಯೂರಪ್ಪ ಆರೋಪಗಳನ್ನು ಮಾಡುತ್ತಾರೆ. ಅದಕ್ಕೆ ಸರಿಯಾಗಿ ಶೋಭಾ ಕರಂದ್ಲಾಜೆಯೂ ಮಾತನಾಡುತ್ತಾರೆ. ಒಂದು ರೀತಿಯಲ್ಲಿ ಅವರಿಬ್ಬರು ‘ತಾಳ-ಮೇಳ’ ಇದ್ದ ಹಾಗೆ ಎಂದು ವ್ಯಂಗ್ಯವಾಡಿದರು.
ರೈತರ ಸಾಲಮನ್ನಾ ಮಾಡದಿದ್ದರೆ ನಾಲ್ಕು ಲಕ್ಷ ಜನರನ್ನು ಕರೆತಂದು ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಯಡಿಯೂರಪ್ಪ ವೀರಾವೇಶದಿಂದ ಹೇಳಿಕೆಗಳನ್ನು ನೀಡುತಿದ್ದರು. ಅವರದ್ದು ಉತ್ತರಕುಮಾರನ ಪೌರುಷ. ಅವರಿಗೆ ತಾಕತ್ತಿದ್ದರೆ ಸಂಸತ್ತಿಗೆ ಮುತ್ತಿಗೆ ಹಾಕಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗೋಕೆ ಅವರಪ್ಪನಾಣೆ ಸಾಧ್ಯವಿಲ್ಲ. 70 ವರ್ಷ ಆಯ್ತು ಅವರಿಗೆ ಮುಖ್ಯಮಂತ್ರಿ ಆಗಬೇಕೆಂದು ಓಡಾಡುತ್ತಿದ್ದಾರೆ. ಮಾತೆತ್ತಿದ್ದರೆ ಸೀರೆ ಕೊಟ್ಟೆ, ಸೈಕಲ್ ಕೊಟ್ಟೆ ಎನ್ನುತ್ತಾರೆ. ಆದರೆ, ರಾಜ್ಯದ ಅಭಿವೃದ್ಧಿಗೆ ಯಾವುದೆ ಕೊಡುಗೆ ನೀಡಿಲ್ಲ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ತಲೆದೋರಿದ್ದ ಭೀಕರ ಬರಗಾಲದ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಮೂವರು ಸಚಿವರು ನೀಲಿ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದರು. ಇವರಿಗೆ ಸಂಸ್ಕೃತಿಯೇ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಬಿಜೆಪಿ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಉತ್ತರಪ್ರದೇಶದಲ್ಲಿ ಚುನಾವಣೆ ಗೆದ್ದಂತೆ ಜಾತಿಗಳ ನಡುವೆ ಕಿಡಿ ಹಚ್ಚಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಇದು ಬಸವಣ್ಣ, ಸಂತರು, ದಾಸರ ನಾಡು. ಸರ್ವಧರ್ಮ ಸಹಿಷ್ಣುತೆಯ ಬೀಡು. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ನಿಶ್ಚಿತ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಸರಕಾರದ ವಿರುದ್ಧ ಆರೋಪಗಳನ್ನು ಮಾಡಲು ಬಿಜೆಪಿಯವರ ಬಳಿ ಏನು ಇಲ್ಲ. ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಮನಸ್ವಿನಿಯಂತಹ ಹತ್ತು ಹಲವು ಬಡವರ ಕಲ್ಯಾಣ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ. ನಮ್ಮನ್ನು ಬಡವರ ವಿರೋಧಿ ಅಂತ ಕರೆಯೋಕೂ ಅವರಿಗೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ರೈತರ ಸಾಲ ಮನ್ನಾ ಮಾಡಿದ ನಂತರ ಅವರಿಗೆ ನಮ್ಮನ್ನು ಟೀಕಿಸಲು ವಿಷಯಗಳೇ ಇಲ್ಲದಂತಾಗಿದೆ. ಆದುದರಿಂದಲೆ, ಮುಂದಿನ ಚುನಾವಣೆಯಲ್ಲಿ ಮತಗಳಿಸಲು ಜನರ ನಡುವೆ ಕೋಮುದ್ವೇಷ ಹರಡಿ, ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.