ಪ್ರತಾಪ್‌ಸಿಂಹ ‘ಇಮ್ಮೆಚೂರ್ ಫೆಲೋ’: ಮುಖ್ಯಮಂತ್ರಿ
ಕೊಪ್ಪಳ, ಜು.13: ಆರೆಸೆಸ್ಸ್ ಮುಖಂಡ ಶರತ್ ಮಡಿವಾಳ ಹತ್ಯೆಯನ್ನು ತಮ್ಮ ಆಪ್ತರು ಮಾಡಿರುವುದಾಗಿ ಆರೋಪಿಸಿರುವ ಸಂಸದ ಪ್ರತಾಪ್‌ಸಿಂಹ ಇಮ್ಮೆಚುರ್ಡ್ ಫೆಲೋ (ಅಪ್ರಬುದ್ಧ ವ್ಯಕ್ತಿ) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹಗೆ ರಾಜಕೀಯವಾಗಿ ಇನ್ನು ಪ್ರಬುದ್ಧತೆ ಬಂದಿಲ್ಲ. ಬಿಜೆಪಿಯವರದ್ದು ತೋಳ ಹಾಗೂ ಕುರಿಮರಿ ಕಥೆ ಇದ್ದಂತೆ. ಅವರೇ ಕೋಮುವಾದ ಮಾಡಿ, ಬೇರೆಯವರಿಗೆ ಹೇಳುತ್ತಾರೆ ಎಂದು ಕಿಡಿಗಾರಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರಿಗೆ ಸೂಚಿಸಿದ್ದೇನೆಯೆ ಹೊರತು, ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯರನ್ನಲ್ಲ. ಅವರು ಅಲ್ಲಿಗೆ ಹೋಗಿಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ, ಗುಪ್ತಚರ ದಳದ ಐಜಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ತನಿಖೆಗೆ ಆದೇಶ: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.