ಹಜ್‍ ನಿರ್ವಹಿಸಲು ಲಂಡನ್‍ನಿಂದ ಸೈಕಲ್‍ನಲ್ಲಿ ಹೊರಟ ತಂಡ

Update: 2017-07-14 07:12 GMT

ರಿಯಾದ್,ಜು.14: ಈ ಬಾರಿಯ ಹಜ್ ನಿರ್ವಹಿಸಲು ಬ್ರಿಟನ್‍ನ ರಾಜಧಾನಿ ಲಂಡನ್‍ನಿಂದ ಎಂಟು ಮಂದಿ ಸೈಕಲ್‍ನಲ್ಲಿ ಹೊರಡಲಿದ್ದಾರೆ. ಆರು ವಾರಗಳ ಸುದೀರ್ಘ ಪ್ರಯಾಣವನ್ನು ಇಂದು ಆರಂಭಿಸುತ್ತಿದ್ದಾರೆ. ಯುದ್ಧ ಪೀಡಿತ ಸಿರಿಯಾಕ್ಕೆ ವೈದ್ಯಕೀಯ ನೆರವಿಗಾಗಿ ಒಂದು ದಶಲಕ್ಷ ಪೌಂಡ್ ಸಂಗ್ರಹಿಸುವ ಗುರಿಯನ್ನು ಕೂಡಾ ಇವರು ಹೊಂದಿದ್ದಾರೆ. ಹಜ್‍ಗೆ ಆರಂಭಕಾಲದಲ್ಲಿ ಮುಸ್ಲಿಮರು ಪಾದಯಾತ್ರೆ ಮಾಡಿ ಬರುತ್ತಿದ್ದರು. ಈಪರಂಪರೆಯನ್ನು ಎತ್ತಿಹಿಡಿಯುವುದು ಕೂಡ ತಮ್ಮ ಉದ್ದೇಶವಾಗಿದೆ ಎಂದು ಈ ತಂಡ ಹೇಳಿದೆ. ಪೂರ್ವ ಲಂಡನ್‍ನಿಂದ ಪ್ರಯಾಣ ಆರಂಭಿಸಿ ಅಲ್ಲಿಂದ ನೂರು ಕಿಲೊಮೀಟರ್ ದೂರದ ದಕ್ಷಿಣ ಬಂದರು  ನಗರವಾದ ನ್ಯೂಹವಾನಕ್ಕೆ ಬರಲಿದ್ದಾರೆ.ಅಲ್ಲಿಂದ ಫೆರಿಬೋಟ್‍ನಲ್ಲಿಹತ್ತಿ ಇಂಗ್ಲಿಷ್ ಕಾಲುವೆ ದಾಟಿ ಫ್ರಾನ್ಸ್‍ನ ಕರಾವಳಿ ಪಟ್ಟಣ ದಿಯಪ್‍ಗೆ ತಲುಪಲಿದ್ದಾರೆ.

 ಪುನಃ ಸೈಕಲ್‍ನಲ್ಲಿ ಫ್ರೆಂಚ್ ರಾಜಧಾನಿ ಪ್ಯಾರಿಸಿಗೆ ಬರಲಿದ್ದು, ಇಲ್ಲಿಗೆ ತಲುಪಬೇಕಾದರೆ ಸುಮಾರು 200 ಕಿಲೊಮೀಟರ್ ಪ್ರಯಾಣಿಸಬೇಕಾಗಿದೆ. ಪ್ಯಾರಿಸ್‍ನಿಂದ ಸ್ವಿಟ್ಝರ್‍ಲೆಂಡ್, ಜರ್ಮನಿ, ಆಸ್ಟ್ರೇಲಿಯ, ಲೈಶೆನ್‍ಸ್ಟೈನ್ ದಾರಿಯಾಗಿ ಇಟಲಿಗೆ ತಲುಪುತ್ತಾರೆ. ಅಲ್ಲಿಂದ ವೆನಿಸ್‍ಗೆ ಬರಲಿದೆ. ಸಾವಿರ ಕಿಲೊ ಮೀಟರ್ ದೂರದ ಪ್ಯಾರಿಸ್-ವೆನಿಸ್ ಅತಿ ಕಠಿಣ ದಾರಿಯಾಗಿದೆ. ಗ್ರೀಸ್‍ನ ಇಗುಮೆನಿಸ್ಟಕ್ಕೆ ಫೆರಿ ಹತ್ತಿ ವೆನಿಸ್‍ಗೆ ತಲುಪುತ್ತಾರೆ. ಇಗುಮೆನಿಸ್ಟದಿಂದ 450 ಕಿಲೊಮೀಟರ್ ಸಾಗಿ ರಾಜಧಾನಿ ಎಥೆನ್ಸ್‍ಗೆ. ಇಲ್ಲಿಗೆ ಪ್ರಯಾಣದ ಒಂದುಘಟ್ಟ ಕೊನೆಗೊಳ್ಳುತ್ತದೆ. ಇನ್ನು ಯುರೋಪ್‍ನಿಂದ ಆಫ್ರಿಕಕ್ಕೆ ತೆರಳುತ್ತಾರೆ.

ಎಥೆನ್ಸ್‍ನಿಂದ ವಿಮಾನದಲ್ಲಿ ಈಜಿಪ್ಟ್‍ನ ಉತ್ತರ ನಗರ ಅಲೆಕ್ಸಾಂಡ್ರಿಯಕ್ಕೆ, ಅಲ್ಲಿಂದ ಪುನಃ ಸೈಕಲ್‍ನಲ್ಲಿ ಈಜಿಪ್ಟ್ ರಾಜಧಾನಿ ಕೈರೋ ಮೂಲಕ ಸಾಗಿ ಕರಾವಳಿ ನಗರವಾದ ಹುರ್ಗೋದಿಗೆ ಬರಲಿದ್ದಾರೆ. ಸುಮಾರು 3,500 ಕಿಲೊಮೀಟರ್ ಸೈಕಲ್‍ನಲ್ಲಿ ಇವರು ಪ್ರಯಾಣಿಸಲಿದ್ದಾರೆ. ಒಟ್ಟು ಎಂಟು ದೇಶಗಳಲ್ಲಿ ಎಂಟು ಮಂದಿ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಇವರು ವೃತ್ತಿಪರ ಸೈಕಲಿಸ್ಟ್‍ಗಳಲ್ಲ. ಇವರು ಪ್ರಯಾಣಿಸುವ ದೇಶಗಳಲ್ಲಿ ಇವರನ್ನು ವಿವಿಧ ಗುಂಪುಗಳು ಸ್ವಾಗತಿಸಲಿವೆ.

 ಆಯಾಯ ದೇಶಗಳ ಸೈಕ್ಲಿಂಗ್ ಗುಂಪುಗಳು ತಮ್ಮಗಡಿಯವರೆಗೆ ಇವರ ಜೊತೆ ಪ್ರಯಾಣಿಸುತ್ತವೆ. ಈಪ್ರಯಾಣದ ವೇಳೆ ಸಿರಿಯದ ನಿಧಿಗಾಗಿ ಜನರಿಂದ ದೇಣಿಗೆಯನ್ನು ತಂಡ ಪಡೆಯಲಿದೆ. ಬ್ರಿಟನ್ ಮತ್ತು ಮಲೇಶ್ಯಾ ದಕೆಲವು ಸ್ವಯಂಸೇವಾ ಸಂಘಟನೆಗಳಿಗೆ ಬೆಂಬಲ ನೀಡುವುದು ಕೂಡಾ ಇವರ ಉದ್ದೇಶವಾಗಿದೆ. ಇದೇ ತಂಡ ಈವರೆಗೆ ಸಿರಿಯಾಕ್ಕೆ 85 ಆ್ಯಂಬುಲೆನ್ಸ್‍ಗಳನ್ನು ಕಳುಹಿಸಿಕೊಟ್ಟಿವೆ. ತಮ್ಮ ಇಂತಹ ಚಟುವಟಿಕೆಗಳನ್ನು ವ್ಯಾಪಕಗೊಳಿಸಲು ತಂಡ ಪ್ರಯತ್ನಿಸುತ್ತಿದೆ. ಹಗಲಿನ ವೇಳೆ ಸೈಕಲ್ ನಲ್ಲಿ ಪ್ರಯಾಣಿಸಿ ರಾತ್ರಿಯ ವೇಳೆ ವಿಶ್ರಾಂತಿ ಪಡೆಯಲಿದೆ. ಪ್ರಯಾಣದ ವಿವರಗಳನ್ನು ಪ್ರತಿದಿವಸವೂ ಜಗತ್ತಿನೊಂದಿಗೆ ಹಂಚಿಕೊಳ್ಳಲು ವೆಬ್‍ಸೈಟನ್ನು ಕೂಡಾ ಇವರು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News