ಜು.17ರ ರಾಷ್ಟ್ರಪತಿ ಚುನಾವಣೆಗೆ ಸಕಲ ಸಿದ್ಧತೆ: ಎಸ್.ಮೂರ್ತಿ
ಬೆಂಗಳೂರು, ಜು. 14: ಇದೇ ತಿಂಗಳ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜು.17ರ ಬೆಳಗ್ಗೆ 10ರಿಂದ ಸಂಜೆ 5ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, 224 ಮಂದಿ ಶಾಸಕರು ಹಾಗೂ ಲೋಕಸಭೆ ಕಾರ್ಯದರ್ಶಿಯ ಅನುಮತಿ ಪಡೆದುಕೊಂಡ ರಾಜ್ಯದಿಂದ ಆಯ್ಕೆಯಾದ ಸಂಸದರು ಇಲ್ಲಿಯೆ ಮತದಾನ ಮಾಡಲು ಅವಕಾಶವಿದೆ ಎಂದು ಹೇಳಿದರು. ಅಲ್ಲದೆ, ಅನ್ಯ ರಾಜ್ಯಗಳ ಶಾಸಕರು, ಸಂಸದರು ತಮ್ಮ ಮತ ಪತ್ರವನ್ನು ರಾಜ್ಯಕ್ಕೆ ವರ್ಗಾವಣೆ ಮಾಡಿಕೊಂಡು ಮತ ಚಲಾಯಿಸುವ ಅವಕಾಶವೂ ಇದೆ ಎಂದ ಎಸ್.ಮೂರ್ತಿ, ಮತದಾರರಾದವರು ತಮ್ಮ ಮತವನ್ನು ಮತಪತ್ರದ ಮೂಲಕ ರಹಸ್ಯವಾಗಿ ಚಲಾಯಿಸಬಹುದಾಗಿದೆ ಎಂದು ವಿವರ ನೀಡಿದರು.
ನೀಲಿ ಶಾಯಿ ಪೆನ್ ಬಳಕೆ: ಮತಪತ್ರದ ಮೂಲಕ ರಹಸ್ಯ ಮತದಾನಕ್ಕೆ ನೀಲಿ ಶಾಯಿಯ ಪೆನ್ ಬಳಕೆ ಮಾಡಬೇಕಾಗುತ್ತದೆ. ಅದನ್ನು ಮತ ಕೇಂದ್ರದಲ್ಲೆ ಒದಗಿಸಲಾಗುವುದು ಎಂದ ಅವರು, ಮತದಾರರಾದವರು ಮತಪತ್ರದಲ್ಲಿ ಮೊದಲ ಪ್ರಾಶಸ್ತ್ಯ ಮತಕ್ಕೆ-1, ಎರಡನೆ ಪ್ರಾಶಸ್ತ್ಯದ ಮತಕ್ಕೆ-2 ಎಂದು ನಮೂದಿಸಬೇಕು.
ಒಂದು ವೇಳೆ ಕೇವಲ 2 ಎಂದು ಬರೆದಲ್ಲಿ ಆ ಮತ ಅಸಿಂಧುವಾಗಲಿದೆ. ಇದನ್ನು ಎಲ್ಲ ಮತದಾರರ ಗಮನಕ್ಕೆ ತರಲಾಗಿದೆ ಎಂದ ಅವರು, ಮತಪೆಟ್ಟಿಗೆ ಈಗಾಗಲೇ ವಿಧಾನಸೌಧದ ಕೊಠಡಿ-107ರಲ್ಲಿ ಭದ್ರವಾಗಿಡಲಾಗಿದೆ. ಆ ಕೊಠಡಿಗೆ ಭದ್ರತೆ ಕಲ್ಪಿಸಲಾಗಿದೆ. ಮತದಾನದ ದಿನ ಚುನಾವಣಾ ಆಯೋಗ ನಿಯೋಜನೆ ಮಾಡಿರುವ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಅದನ್ನು ಮತ ಕೇಂದ್ರಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ವಿಮಾನದ ಮೂಲಕ ದಿಲ್ಲಿಗೆ ರವಾನೆ: ರಾಷ್ಟ್ರಪತಿ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಮತಪೆಟ್ಟಿಗೆಯನ್ನು ವಿಮಾನದ ಮೂಲಕ ಹೊಸದಿಲ್ಲಿಗೆ ರವಾನಿಸಲಾಗುತ್ತದೆ. ಮತಪೆಟ್ಟಿಗೆ ಕೊಂಡೊಯ್ಯಲು ವಿಮಾನದಲ್ಲಿ ಮತಪೆಟ್ಟಿಗೆಗೆ ಒಂದು ಆಸನ ಕಾಯ್ದಿರಿಸಲಾಗಿದೆ. ಮತಪೆಟ್ಟಿಗೆಯೊಂದಿಗೆ ತಾವು, ವೀಕ್ಷಕರು ವಿಮಾನದಲ್ಲಿ ಪ್ರಯಾಣ ಮಾಡಿ ಲೋಕಸಭೆ ಕಾರ್ಯದರ್ಶಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.