ಇಸ್ರೇಲ್ ನ ಹಜ್ ಯಾತ್ರಿಕರಿಗೆ ವಿಶೇಷ ವಿಮಾನ: ಸೌದಿಗೆ ಮನವಿ

Update: 2017-07-15 05:28 GMT

ಹೊಸದಿಲ್ಲಿ, ಜು.15: ಇಸ್ರೇಲ್‌ನ ಮುಸ್ಲಿಂ ನಾಗರಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರ ಸೌದಿ ಅರೇಬಿಯಾ ಜತೆ ಮಾತುಕತೆ ಆರಂಭಿಸಿದ್ದು, ಮೆಕ್ಕಾಗೆ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡುವಂತೆ ಕೋರಿದೆ.

ಈ ಪ್ರಸ್ತಾವದ ಅನ್ವಯ ಇಸ್ರೇಲಿ ಮುಸ್ಲಿಮರು ನೇತರವಾಗಿ ಟೆಲ್ ಅವೀವ್ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾಗೆ ವಿಮಾನ ಯಾನ ಕೈಗೊಳ್ಳಲಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಉಭಯ ದೇಶಗಳ ಮೈತ್ರಿ ದೇಶವಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಐತಿಹಾಸಿಕ ನಿಷೇಧವನ್ನು ಬದಿಗೊತ್ತಿ ನೇರವಾಗಿ ರಿಯಾದ್‌ನಿಂದ ಟೆಲ್ ಅವೀವ್‌ಗೆ ಯಾನ ಕೈಗೊಂಡಿದ್ದರು. ಇಸ್ರೇಲ್‌ಗೆ ಅಧಿಕೃತ ಮಾನ್ಯತೆಯನ್ನು ಸೌದಿ ಅರೇಬಿಯಾ ನೀಡದಿದ್ದರೂ, ಕಳೆದ ಕೆಲ ವರ್ಷಗಳಲ್ಲಿ ಎರಡೂ ದೇಶಗಳು ಸಮಾನ ಎದುರಾಳಿಯಾದ ಇರಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಕಾರಣದಿಂದಾಗಿ ನಿಕಟವಾಗುತ್ತಿವೆ.

ಕಳೆದ ಎರಡು ವರ್ಷಗಳಿಂದೀಚೆಗೆ ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಇಸ್ರೇಲಿ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಇಸ್ರೇಲಿ ಸುದ್ದಿ ವೆಬ್‌ಸೈಟ್ ಹರಾತ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News