×
Ad

ಕ್ರೆಡಿಟ್ ಕಾರ್ಡ್‌ಗಳ ಆಧುನೀಕರಣಕ್ಕೆ ಸೂಚನೆ: ಪ್ರವೀಣ್‌ಸೂದ್

Update: 2017-07-15 22:30 IST

ಬೆಂಗಳೂರು, ಜು.15: ನಗದುರಹಿತ ವ್ಯವಹಾರದ ಹಿನ್ನೆಲೆ ಆನ್‌ಲೈನ್‌ನಲ್ಲಿ ವಂಚನೆ ಕೃತ್ಯಗಳು ಹೆಚ್ಚುತ್ತಿರುವುದರಿಂದ ರಿಸರ್ವ್‌ಬ್ಯಾಂಕ್ ಸೇರಿ ಇತರ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳನ್ನು ಇನ್ನಷ್ಟು ಆಧುನಿಕಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಕಲಿ ಎಟಿಎಂ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ದಂಧೆ ಹೆಚ್ಚಾಗುತ್ತಿದ್ದು, ಬ್ಯಾಂಕ್‌ನಿಂದ ನೀಡಲಾಗುವ ಕಾರ್ಡ್‌ಗಳನ್ನು ಹೈಟೆಕ್‌ಗೊಳಿಸಿ ವಂಚನೆ ನಡೆಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಎಟಿಎಂ ಕೇಂದ್ರಗಳಲ್ಲಿ ಸ್ಕಿಪ್ಪಿಂಗ್ ಮಿಷನ್ ಅಳವಡಿಸಿ ಖಾತೆದಾರರ ಮಾಹಿತಿ ಪಡೆದು 13 ಲಕ್ಷಕ್ಕೂ ಹೆಚ್ಚಿನ ವಂಚನೆ ನಡೆಸಿರುವ 29ಕ್ಕೂ ಹೆಚ್ಚು ಪ್ರಕರಣಗಳು ನಾಲ್ಕು ದಿನಗಳಲ್ಲೇ ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ ಎಂದರು.

ಕಾರ್ಡ್‌ಗಳ ಬದಲು ಗ್ರಾಹಕರಿಗೆ ಚಿಪ್ ವ್ಯವಸ್ಥೆ ಮಾಡುವಂತೆಯೂ ಸಲಹೆ ನೀಡಲಾಗಿದೆ. ಎಟಿಎಂ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ವಿನಂತಿಸಲಾಗಿದೆ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News