ದಲಿತರ ಭೂತ, ಭವಿಷ್ಯದ ಕುರಿತಂತೆ ತೇಲ್ತುಂಬ್ಡೆ

Update: 2017-07-15 18:48 GMT

ಬಿಜೆಪಿ ಕೋಮುವಾದಿ ಮತ್ತು ಜಾತಿವಾದಿ ಎಂದು ದೇಶದ ಪ್ರಗತಿಪರ ಶಕ್ತಿಗಳು ಖಂಡಿಸಿದಾಗ ಕಾಂಗ್ರೆಸ್ ಪುಳಕಗೊಳ್ಳುತ್ತದೆ. ಆದರೆ ಆಳುವ ವರ್ಗಗಳ ಮುಂಚೂಣಿ ಪಡೆಯಾದ ಕಾಂಗ್ರೆಸ್ ಅದಕ್ಕಿಂತ ಭಿನ್ನವಾಗಿದೆಯೇ? ಕೋಮುವಾದ ಕುರಿತಂತೆ ಅದರ ದಾಖಲೆ ಬಹುತೇಕ ಮಟ್ಟಿಗೆ ಅನುಮಾನಾಸ್ಪದವಾಗಿದೆ.

ದಲಿತರ ಸಮಸ್ಯೆಗಳ ಕುರಿತಂತೆ ಅದರ ವ್ಯವಹಾರಗಳು ಅಸ್ಪಷ್ಟತೆಯಿಂದ ಕೂಡಿವೆ. ದಲಿತರನ್ನು ಅವರ ರಾಜಕೀಯ ಸ್ವಾಯತ್ತೆಯಿಂದ ವಂಚಿತರನ್ನಾಗಿಸಿದ ಪೂನಾ ಒಪ್ಪಂದದ ದಿನಗಳಿಂದ ಆರಂಭಿಸಿ ದಲಿತರ ರಾಜಕೀಯದ ತತ್ವರಹಿತ ಸೇರ್ಪಡೆಗಳ ಮೊದಲಿನ ತನಕ ಕಾಂಗ್ರೆಸ್ ವಹಿಸಿರುವ ಪಾತ್ರ ಅದರ ದಲಿತ ಸ್ನೇಹಿ ಎಂಬ ಸ್ವಕೀಯ ಚಿತ್ರಣಕ್ಕೆ ವಿರುದ್ಧವಾಗಿದೆ. ಪ್ರಾಯಶಃ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಏಕೈಕ ವ್ಯತ್ಯಾಸವಿರುವುದು ಅದರ ರಣನೀತಿಯ ಜಟಿಲತೆಯಲ್ಲಿ ಎಂದು ಅನುಮಾನ ವ್ಯಕ್ತಪಡಿಸುವ ಡಾ.ಆನಂದ್ ತೇಲ್ತುಂಬ್ಡೆ,‘ದಲಿತರು: ಭೂತ-ಭವಿಷ್ಯ’ಕೃತಿಯಲ್ಲಿ ದಲಿತರ ಸಮಕಾಲೀನ ಒಳಸುಳಿ, ಸಂದಿಗ್ಧಗಳನ್ನು ಸೂಕ್ಷ್ಮವಾಗಿ ಗುರುತಿಸಿ ಬರೆದಿದ್ದಾರೆ.

‘‘ಮೂರ್ತೀಕರಣದಿಂದ ಎಲ್ಲವೂ ಸ್ಥಾವರಗೊಳ್ಳುವ ಅಪಾಯವಿರುವ ಭಾರತದಲ್ಲಿ ಆನಂದರ ಜಾಗೃತ ವಿಮರ್ಶಾಪ್ರಜ್ಞೆ ಮಾರ್ಕ್ಸ್‌ವಾದ-ಅಂಬೇಡ್ಕರ್ ವಾದವನ್ನು ಮುನ್ನಡೆಸಬಲ್ಲದು. ಈ ಎರಡೂ ಧಾರೆಗಳು ಒಂದುಗೂಡಿ ನಡೆಯುವುದು ಶೋಷಿತ ಸಮುದಾಯಗಳ ಬಿಡುಗಡೆಯ ದಾರಿಗಷ್ಟು ಬಲ ತುಂಬಬಹುದು. ಪರಸ್ಪರ ಭಿನ್ನಾಭಿಪ್ರಾಯ ಮರೆತು ಅವು ಒಂದುಗೂಡಬೇಕೆಂದು ಪ್ರತಿಪಾದಿಸುವ ಆನಂದ್ ಮಾತುಗಳನ್ನು ವಾಸ್ತವದ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗಿದೆ’’ ಎಂದು ಕೃತಿಯನ್ನು ಸಂಪಾದಿಸಿಕನ್ನಡಕ್ಕಿಳಿಸಿರುವ ಅನುಪಮಾ ಅವರು ಅಭಿಪ್ರಾಯಪಡುತ್ತಾರೆ.

ಕೃತಿಯಲ್ಲಿ ಇತಿಹಾಸ, ವರ್ತಮಾನ, ಭವಿಷ್ಯದಲ್ಲಿ ದಲಿತರು ಎದುರಿಸಿದ, ಎದುರಿಸುತ್ತಿರುವ, ಎದುರಿಸಲಿರುವ ಸವಾಲುಗಳನ್ನು ತೇಲ್ತುಂಬ್ಡೆ ಚರ್ಚಿಸಿದ್ದಾರೆ. ಕೆಂಪು ವರ್ಸಸ್ ನೀಲಿ ಎನ್ನುವ ಮಾತುಗಳನ್ನು ನಿರಾಕರಿಸುವ ಲೇಖಕರು, ಸದ್ಯದಲ್ಲಿ ದಲಿತರು ಎದುರಿಸುತ್ತಿರುವ ಫ್ಯಾಶಿಸ್ಟ್ ಮತ್ತು ಕಾರ್ಪೊರೇಟ್ ಆಘಾತಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಖೈರ್ಲಾಂಜಿ ಪ್ರಕರಣದ ಹೈಕೋರ್ಟ್‌ತೀರ್ಪು ಹೇಗೆ ದಲಿತರ ಆತ್ಮವಿಶ್ವಾಸದ ಮೇಲೆ ದಾಳಿ ನಡೆಸಿತು ಎನ್ನುವುದನ್ನು ಹೇಳುವ ಅವರು, ದಲಿತರ ಮೇಲೆ ನಡೆಯುತ್ತಿರುವ ದಾಳಿಗಳ ಬೇರೆ ಬೇರೆ ಸ್ವರೂಪಗಳನ್ನು ಚರ್ಚಿಸಿದ್ದಾರೆ.

ದಲಿತ ಮೀಸಲಾತಿಯಿಂದ ಹುಟ್ಟಿಕೊಂಡ ದಲಿತ ಬೂರ್ಷ್ವಾ ಜನರ ಕಡೆಗೆ ಗಮನ ಸೆಳೆಯುವ ಅವರು, ದಲಿತ ಚಳವಳಿಗೆ ಹೇಗೆ ದಲಿತರೇ ಸಮಸ್ಯೆಯಾಗಿದ್ದಾರೆ ಎನ್ನುವ ಅಂಶದ ಕಡೆಗೂ ಬೆಟ್ಟು ಮಾಡುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ. 

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News