ದಿಲ್ಲಿ ದರ್ಬಾರ್

Update: 2017-07-15 18:51 GMT

ವಸುಂಧರಾ ಗ್ರಹಗತಿ ಚೆನ್ನಾಗಿಲ್ಲ!
ರಾಜಸ್ಥಾನದ ಗ್ಯಾಂಗ್‌ಸ್ಟರ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿ 20 ದಿನ ಕಳೆದಿದೆ. ಈತನ ಕುಟುಂಬ ಹಾಗೂ ರಜಪೂತ ಮುಖಂಡರು ಈ ಎನ್‌ಕೌಂಟರ್ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಎನ್‌ಕೌಂಟರ್ ಹೆಸರಿನಲ್ಲಿ ಇದು ವ್ಯವಸ್ಥಿತ ಹತ್ಯೆ ಎನ್ನುವುದು ಅವರ ಆರೋಪ. ಇದರ ಪರಿಣಾಮ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಬಿಜೆಪಿಯ ವೋಟ್‌ಬ್ಯಾಂಕ್ ಎನಿಸಿದ ರಜಪೂತ ಮತಗಳು ಕೈತಪ್ಪುವ ಭೀತಿ ಎದುರಾಗಿದೆ. ಈ ವಿವಾದದ ಬಗ್ಗೆ ಇದೀಗ ದಿಲ್ಲಿ ಮುಖಂಡರ ಮಧ್ಯಸ್ಥಿಕೆಗೆ ಮಾರ್ಗ ತೆರೆದುಕೊಂಡಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ದಿಲ್ಲಿ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಸಿಎಂ ದಿಲ್ಲಿಯಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇನೂ ಹೊಂದಿಲ್ಲ. ವದಂತಿಗಳನ್ನು ನಂಬಬಹುದಾದರೆ, ಯಾವುದೇ ಒಂದು ತಪ್ಪುಹೆಜ್ಜೆ, ವಸುಂಧರಾ ಅವರ ಸಿಎಂ ಗಾದಿಗೇ ಚ್ಯುತಿ ತರಬಹುದು.


ಮೂಳೆ ಮುರಿತಕ್ಕೊಳಗಾದ ಸಿಂಗ್!
ದೇಶಾದ್ಯಂತ ಹಲವು ಭದ್ರತಾ ಸಮಸ್ಯೆಗಳು ಉಲ್ಬಣಿಸುತ್ತಿದ್ದರೂ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. 68 ವರ್ಷದ ಸಿಂಗ್ ಅವರ ಪಾದ ತಿರುಚಿದ್ದರಿಂದ ಮೂಳೆ ಮುರಿತಕ್ಕೆ ಒಳಗಾಗಿದ್ದು, ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಅವರಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಆದರೆ ಅವರು ಹಾಗೆ ಮಾಡುತ್ತಿಲ್ಲ. ಇಡೀ ಗೃಹ ಸಚಿವಾಲಯವನ್ನು ಮನೆಗೆ ತಂದುಕೊಂಡು ಕಾರ್ಯಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿಕ್ಕಿಂನಲ್ಲಿ ಚೀನಾ ಜತೆ ಗಡಿಸಂಘರ್ಷ, ಪಶ್ಚಿಮ ಬಂಗಾಳದ ವಿವಿಧೆಡೆ ಗಲಭೆ ಹಾಗೂ ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಮುಂದುವರಿದಿರುವ ಹಿಂಸಾಚಾರದಂಥ ಘಟನೆಗಳು ಸಿಂಗ್ ಅವರನ್ನು ಬ್ಯುಸಿಯಾಗಿರಿಸಿವೆ. ಗೃಹ ಸಚಿವರ ಅಧಿಕೃತ ನಿವಾಸ ಅಕ್ಬರ್ ರಸ್ತೆಯ ನಂಬರ್ 17ರ ನಿವಾಸದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ. ಇಲ್ಲಿಂದಲೇ ಇಡೀ ದೇಶದ ಆಗುಹೋಗುಗಳ ಮೇಲೆ ಸಚಿವರು ನಿಗಾ ಇಟ್ಟಿದ್ದಾರೆ. ಟ್ವಿಟರ್‌ನಲ್ಲೂ ಅವರು ಸಕ್ರಿಯರಾಗಿದ್ದಾರೆ. ಬೆಡ್‌ನಿಂದಲೇ ಹಲವು ಕೆಲಸಗಳನ್ನು ಸಿಂಗ್ ಮಾಡುತ್ತಿರುವುದು ಸುಸ್ಪಷ್ಟ.


ನಖ್ವಿ ವರ್ಸಸ್ ಹುಸೈನ್
ಬಿಜೆಪಿ ಮುಖಂಡರಾದ ಶಹನವಾಝ್ ಹುಸೈನ್ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ನಡುವಿನ ಪೈಪೋಟಿ ಇದೀಗ ವಿಶೇಷ ಮಹತ್ವ ಪಡೆದುಕೊಂಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಈ ಇಬ್ಬರು ಮುಖಂಡರು, ಪರಸ್ಪರ ಭೇಟಿಯಾಗಲೂ ಅವಕಾಶ ಮಾಡಿಕೊಳ್ಳುತ್ತಿಲ್ಲ. ಉಭಯ ನಾಯಕರಿಗೆ ನಿಷ್ಠಾವಂತ ಬೆಂಬಲಿಗರಿದ್ದಾರೆ. ಆದ್ದರಿಂದ ಕಾಂಗ್ರೆಸ್ ಮುಖಂಡ ಹಾಗೂ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರಸಿಂಗ್ ಹೂಡಾ ಈದ್ ಸಂದರ್ಭದಲ್ಲಿ ಹುಸೈನ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ, ನಖ್ವಿ ತಂಡ ತಕ್ಷಣ, ಇಬ್ಬರ ಭೇಟಿಯ ಫೋಟೊವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ಕಳುಹಿಸಿಕೊಟ್ಟಿದೆ. ಹುಸೈನ್ ಅವರು ಕೆಲ ಕಾಂಗ್ರೆಸ್ ಮುಖಂಡರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಬಿಂಬಿಸುವ ಫೋಟೊ ಅದು. ಇನ್ನೊಂದು ಈದ್ ಸಂಭ್ರಮಾಚರಣೆಯಲ್ಲಿ, ನಖ್ವಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ತಿರ ಧಾವಿಸಿದರು. ಆ ಸಮಾವೇಶದ ಸ್ವರೂಪಕ್ಕೆ ಅನುಗುಣವಾಗಿ, ಸಾಂಪ್ರದಾಯಿಕ ಅಪ್ಪುಗೆಯೂ ಕಂಡುಬಂತು. ಇಬ್ಬರು ಮುಖಂಡರ ಆಲಿಂಗನದ ಚಿತ್ರವನ್ನು ಪಸರಿಸುವ ಅವಕಾಶವನ್ನು ಹುಸೈನ್ ತಂಡ ಕಳೆದುಕೊಳ್ಳಲಿಲ್ಲ.


ರಾಜ್ಯಸಭೆಯಲ್ಲಿ ಶಾ?
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಬಳಿಕ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಶಾ ಗುಜರಾತ್‌ನ ನಾರಾಯಣಪುರ ಕ್ಷೇತ್ರದ ಶಾಸಕ. ಆದರೆ ಅವರು ಹೆಚ್ಚು ಮಹತ್ವಾಕಾಂಕ್ಷಿ. ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಶಾ ನಿರ್ಧರಿಸಿದ್ದಾರೆ. ಬಿಜೆಪಿ ಅಧ್ಯಕ್ಷರ ಕಣ್ಣು ರಾಜ್ಯಸಭೆ ಅಥವಾ ಲೋಕಸಭೆ ಸ್ಥಾನದ ಮೇಲಿದೆಯೇ? ಅವರು ಏಕೆ ಸ್ಪರ್ಧಿಸಬೇಕು ಎನ್ನುವುದು ಶಾ ಅವರ ಆಪ್ತ ವಲಯದ ಪ್ರಶ್ನೆ. ಇದು ಅನಗತ್ಯ ಎನ್ನುವುದು ಅವರ ಪ್ರತಿಪಾದನೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ ಜತೆ ರಾಷ್ಟ್ರ ರಾಜಧಾನಿಗೆ ಲಗ್ಗೆ ಇಟ್ಟದ್ದು ಮಾತ್ರವಲ್ಲದೇ ನರೇಂದ್ರ ಮೋದಿಯವರ ಚಾಣಕ್ಯ ಎನಿಸಿಕೊಂಡರು. ಒಂದರ ಮೇಲೊಂದು ಗೆಲುವನ್ನು ಪಕ್ಷಕ್ಕೆ ಸಂಪಾದಿಸಿಕೊಟ್ಟರು. ಅಧಿಕಾರ ನಿಯಂತ್ರಿಸಲು ಅವರಿಗೆ ಸಂಸತ್ತಿನ ಸ್ಥಾನ ಬೇಕಾಗಿಲ್ಲ ಎಂಬ ಅಭಿಮತ ಅವರ ಬೆಂಬಲಿಗರದ್ದು. ಭಾರತೀಯ ರಾಜಕೀಯದ ಮಾನದಂಡ ಅನ್ವಯಿಸುವುದಾದರೆ, 52 ವರ್ಷದ ಶಾ ಇನ್ನೂ ಯುವಕರು. ಶಾ ಅವರಿಗೆ ಉನ್ನತ ಹುದ್ದೆಯ ಮೇಲೆ ದೃಷ್ಟಿ ಇಡುವ ಎಲ್ಲ ಅರ್ಹತೆಯೂ ಇದೆ. ಎಷ್ಟು ಎತ್ತರದ ಹುದ್ದೆ ಎನ್ನುವುದಷ್ಟೇ ಪ್ರಶ್ನೆ.


ರಾಹುಲ್ ವಾಪಸ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹಾಲಿಡೇ ಮೂಡ್ ಬಗ್ಗೆ ಪಕ್ಷದ ಕೆಲ ಮುಖಂಡರ ಗೊಣಗಾಟ ಇನ್ನೂ ಹೊರಬರಬೇಕಿದೆ. ರಜಾಕಾಲದ ವಿಹಾರದಿಂದ ರಾಹುಲ್ ಗಾಂಧಿ ವಾಪಸಾಗಿದ್ದಾರೆ; ಆದರೆ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಇನ್ನೂ ಚಲನಶೀಲರಾಗಿಲ್ಲ. ಬಹುತೇಕ ಮಂದಿ ಹೇಳುವಂತೆ, ಬಹುನಿರೀಕ್ಷಿತ ಎಐಸಿಸಿ ಪುನರ್ ಸಂಘಟನೆ ಬಗ್ಗೆ ಅವರು ತರಾತುರಿಯನ್ನೇನೂ ಹೊಂದಿಲ್ಲ. ಏತನ್ಮಧ್ಯೆ, ಕಾಂಗ್ರೆಸ್ ಕೇಂದ್ರ ಕಚೇರಿಯಾದ ಅಕ್ಬರ್ ರಸ್ತೆಯ 24ನೆ ಸಂಖ್ಯೆಯ ನಿವಾಸ ಅವಿಶ್ರಾಂತವಾಗಿದೆ. ಚುನಾವಣೆಗಳು ಸನಿಹವಾಗುತ್ತಿರುವ ಗುಜರಾತ್, ಮಧ್ಯಪ್ರದೇಶ, ಹರ್ಯಾಣ ಹಾಗೂ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿನ ನಾಯಕರು ಅಧಿಕಾರಾರೂಢ ಬಿಜೆಪಿ ಮೇಲಿನ ದಾಳಿಗೆ ತುದಿಗಾಲಲ್ಲಿ ನಿಂತಿದ್ದಾರೆ. ನಾಯಕತ್ವದ ಬದಲಾವಣೆಗಾಗಿ ಅವರು ಲಾಬಿ ನಡೆಸುತ್ತಿದ್ದಾರೆ. ಆದರೆ ಅವರ ಅತ್ಯುತ್ಸಾಹಕ್ಕೆ ರಾಹುಲ್ ಯಾವ ಸ್ಪಂದನೆಯನ್ನೂ ತೋರಿಸುತ್ತಿಲ್ಲ. ಎಷ್ಟು ಸಮಯ ಅವರು ತಮ್ಮ ಪಕ್ಷದ ಮುಖಂಡರ ನಿರೀಕ್ಷೆಗಳನ್ನು ಅಗೌರವದಿಂದ ಕಾಣಬಹುದು ಎನ್ನುವುದು ಬಹಳಷ್ಟು ಮಂದಿ ಹಿರಿಯ ಮುಖಂಡರ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News