ಎಸ್.ಎಲ್.ಭೈರಪ್ಪ ಇಷ್ಟೇ ಅಂದರೆ ಎಷ್ಟು?

Update: 2017-07-16 09:30 GMT

ಪುಸ್ತಕಮನೆ ಹರಿಹರಪ್ರಿಯ ಕನ್ನಡ ಸಾಹಿತ್ಯ ಪ್ರಪಂಚದ ‘ನೇರಾನೇರ ವಿಮರ್ಶಕ’ರಲ್ಲಿ ಪ್ರಮುಖ ಹೆಸರು. ಪಕ್ಷಪಂಗಡವಿಲ್ಲದೆ ತಮಗೆ ಅನ್ನಿಸಿದ್ದನ್ನು ಸಾಕ್ಷ್ಯಾಧಾರಗಳ ಸಮೇತ ಖಂಡತುಂಡವಾಗಿ ಮಂಡಿಸುವ ಜಾಯಮಾನದವರು. ಅವರ ಕೈಗೆ ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಸಿಕ್ಕಿದರೆ ಹೇಗೆ ಎನ್ನುವ ಪ್ರಶ್ನೆ ತುಂಬ ಹಳೆಯದು. ಅಖಿಲ ಭಾರತ 67ನೆ ಕನ್ನಡ ಸಾಹಿತ್ಯ ಸಮ್ಮೇಳನ ಕನಕಪುರದಲ್ಲಿ ನಡೆದಾಗ ಎಸ್.ಎಲ್. ಭೈರಪ್ಪನವರ ಅಧ್ಯಕ್ಷ ಭಾಷಣವನ್ನು ಸುಡುವ ಯೋಜನೆ ರೂಪಿಸಿದ ಹರಿಹರಪ್ರಿಯ ‘ಸುಳ್ಳುಗಳ ಸರದಾರ’ ಎಂಬ ಹೆಸರಿನ ಲೇಖನವನ್ನೇ ಬರೆದು ಪ್ರಕಟಿಸಿದ್ದಾರೆ. ‘ಎಸ್.ಎಲ್. ಭೈರಪ್ಪ ಇಷ್ಟೇ’- ಎಂಬ ಹರಿಹರಪ್ರಿಯ ಅವರ ಹೊಸ ಕೃತಿಯಲ್ಲಿ ಆ ಲೇಖನವೂ ಸೇರಿಕೊಂಡಿದೆ.

ಭೈರಪ್ಪನವರ ವ್ಯಕ್ತಿತ್ವ ಹಾಗೂ ಅವರ ಸಾಹಿತ್ಯ ವನ್ನು ಒಟ್ಟಾರೆ ದರ್ಶಿಸುವ, ವಿಮರ್ಶಿಸುವ ಯತ್ನ ವಿದು. ಕನ್ನಡದ ವಿಮರ್ಶಾ ಪದ್ಧತಿಯಲ್ಲಿಯೇ ವಿಭಿನ್ನ ಎನ್ನಿಸ ಬಹುದಾದ ಒಂದು ಲೋಕವನ್ನು ಹರಿಹರಪ್ರಿಯ ಪ್ರಸ್ತುತ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಇಲ್ಲಿ ಹನ್ನೆರಡು ವಿಶಿಷ್ಟ ವಿಭಾಗಗಳಿವೆ. ಒಂದು ಕಡೆ ಭೈರಪ್ಪನವರನ್ನು ನಿಲ್ಲಿಸಿ ಇನ್ನೊಂದು ಕಡೆ ಅವರ ಕೃತಿಗಳಲ್ಲಿ ಕಂಡರಿಸಲಾದ ಧರ್ಮಗಳನ್ನು ಪಂಥಗಳನ್ನು ವಾದಗಳನ್ನು ಪರಸ್ಪರ ತುಲನೆ ಮಾಡುತ್ತ ವೈರುಧ್ಯ, ವೈದೃಶ್ಯ, ವೈಷಮ್ಯಗಳನ್ನು ಆಧಾರ ಸಮೇತ ರುಜುಪಡಿಸಲು ಯತ್ನಿಸಿದ್ದಾರೆ.

ಭೈರಪ್ಪನವರು ಬೌದ್ಧಧರ್ಮವನ್ನು, ಕ್ರೈಸ್ತ ಧರ್ಮವನ್ನು, ಇಸ್ಲಾಂ ಧರ್ಮವನ್ನು, ಬ್ರಾಹ್ಮಣರನ್ನು, ದಲಿತರನ್ನು, ಎಡ-ಬಲ ಪಂಥೀಯರನ್ನು ಯಾವ ಯಾವ ಕಾದಂಬರಿಗಳಲ್ಲಿ ತಂದಿದ್ದಾರೋ ಯಾವ ಯಾವ ದೃಷ್ಟಿಕೋನವಿರಿಸಿ ವಿಮರ್ಶಿಸಿದ್ದಾರೋ ಎಂಬಿತ್ಯಾದಿ ವಿವರಗಳನ್ನು ಹರಿಹರಪ್ರಿಯ ಸೂಕ್ಷ್ಮ ಒಳನೋಟಗಳೊಂದಿಗೆ ಪರಾಂಬರಿಸಿದ್ದಾರೆ.

ಭೈರಪ್ಪನವರನ್ನು ಅಪ್ಪಡಿ ಒಪ್ಪುವ ಒಂದು ವರ್ಗ, ಅಪ್ಪಡಿ ತಿರಸ್ಕರಿಸುವ ಇನ್ನೊಂದು ವರ್ಗವಿದೆ. ಆದರೆ ಭೈರಪ್ಪ ಓರ್ವ ಅಸಾಧಾರಣ ಕಾದಂಬರಿಕಾರ ಎಂಬುದನ್ನು ಒಪ್ಪದವರು ವಿರಳ. ಅವರ ಕೃತಿಗಳನ್ನು ಓದತೊಡಗಬೇಕಿದ್ದರೆ ಎರಡೂ ಬಗೆಯ ಪೂರ್ವಾಗ್ರಹ ಅರ್ಥಹೀನ ಎನ್ನುವ ಸತ್ಯವೊಂದು ದೃಗ್ಗೋಚರವಾಗುವುದು ‘ಎಸ್.ಎಲ್. ಭೈರಪ್ಪ ಇಷ್ಟೇ’ ವಿಮರ್ಶಾ ಕೃತಿಯನ್ನು ಓದಿದಾಗಲಷ್ಟೇ. ಲೇಖಕರು ಉದ್ಧರಿಸಿದ ಭೈರಪ್ಪನವರ ಪ್ರಸ್ತುತ ಮಾತುಗಳನ್ನು ಗಮನಿಸೋಣ: ‘ಕ್ರೈಸ್ತ ಮಿಷನರಿಗಳ ದಾಳಿ, ಹಿಂದೂ ಧರ್ಮ ಹಿಂದೂ ಸಮಾಜಗಳಿಗೆ ಅದರಿಂದ ಆಗಿರುವ ಕೆಡುಕುಗಳ ಪ್ರಜ್ಞೆಯಿಂದ ಉಂಟಾದ ಪ್ರತೀಕಾರ ಭಾವವು ನನ್ನಲ್ಲಿ ಬೆರೆತಿತ್ತು. ಆದರೆ ಅದರಿಂದ ರಾಚಮ್ಮ, ಲಿಲ್ಲಿಯಂತಹ ಆತ್ಮೀಯರನ್ನು ಏಕೆ ದೂರವಿಡಬೇಕು? ಅವರ ಸೇವೆಯನ್ನು ಸ್ವೀಕರಿಸುವ ನಾನು ಅವರು ಮುಟ್ಟಿದ ವಸ್ತುವನ್ನು ಏಕೆ ತಿನ್ನಬಾರದು?’ (ಧರ್ಮಶ್ರೀ. ಪು.197)

ಭೈರಪ್ಪನವರಿಗೆ ಹಿಂದೂಗಳ ಬಗ್ಗೆ, ಮುಸಲ್ಮಾನರ ಬಗ್ಗೆ, ಕ್ರೈಸ್ತರ ಬಗ್ಗೆ, ತಮ್ಮದೇ ಆದ ಅಭಿಪ್ರಾಯಗಳಿವೆ. ಅದನ್ನವರು ಶಕ್ತವಾದ ಪದಪ್ರಯೋಗ ಗಳಿಂದಲೇ ಬಿಂಬಿಸುತ್ತಾರೆ. ಅಡ್ಡ ಗೋಡೆಯ ಮೇಲೆ ದೀಪವಿಡುವ ಜಾಯಮಾನ ಅವರದಲ್ಲ. ಹರಿಹರಪ್ರಿಯರು ಮೆಚ್ಚಿಕೊಳ್ಳುವುದೂ ಅಂಥವುಗಳನ್ನೇ. ಭೈರಪ್ಪನವರ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುವುದಕ್ಕೆ ಅನೇಕ ಉದಾಹರಣೆಗಳನ್ನು ಅವರ ಕಾದಂಬರಿಗಳಿಂದ, ಇತರೆಡೆಗಳಿಂದ ಉದ್ಧರಿಸಿದ್ದಾರೆ. ಹುಳುಕುಗಳನ್ನು ಹೇಳುವಾಗ ಅದು ಯಾವ ಧರ್ಮವಾದರೂ ಸರಿಯೆ; ಭೈರಪ್ಪನವರು ಯಾವ ಮುಲಾಜೂ ತೋರಿಸುವುದಿಲ್ಲ ಎಂಬುದನ್ನು ಹರಿಹರಪ್ರಿಯ ನಿರ್ದಿಷ್ಟ ಉದಾಹರಣೆಗಳೊಂದಿಗೆ ಸಾದರಪಡಿಸಿದ್ದಾರೆ. ಕವಿ, ಕತೆಗಾರ ಡಾ. ಕೆ.ವಿ. ತಿರುಮಲೇಶ್ ಇದಕ್ಕೊಂದು ಸುದೀರ್ಘವೂ ಅದ್ಭುತವೂ ಆದ ವಿಮರ್ಶೆಯನ್ನು ಬರೆದಿದ್ದಾರೆ.

ಹರಿಹರಪ್ರಿಯರು ಭೈರಪ್ಪನವರ ಬಗ್ಗೆ ಹೇಳುವ ಒಂದು ಮಾತು ಬಹಳ ಮುಖ್ಯವೆನಿಸುತ್ತದೆ: ಬ್ರಾಹ್ಮಣರಿಂದ, ಹಿಂದೂಗಳಿಂದ ಅನಾಥರಾದ ಭೈರಪ್ಪನವರು ಸ್ವಾಮೀ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಕಟ್ಟಡವನ್ನು ಪ್ರವೇಶಿಸಿದರು. ಇದು ಧಾರ್ಮಿಕ ಮೂಲಭೂತವಾದಿಗಳಿಗೂ ದಲಿತ ಮೀಸಲಾತಿವಾದಿಗಳಿಗೂ ಅರ್ಥವಾಗದೇ ಇರುವುದರ ಹುನ್ನಾರ- ಅಪಾಯಕಾರಿಯಾದದ್ದು.’(ಪು.23-24)

ಭೈರಪ್ಪನವರನ್ನು ಎಷ್ಟರ ಮಟ್ಟಿಗೆ ಹರಿಹರಪ್ರಿಯರು ಓದಿ ಜೀರ್ಣಿಸಿ ಕೊಂಡಿದ್ದಾರೆ ಎಂಬುದನ್ನು ಮೇಲಿನ ಸಾಲುಗಳು ನಿರವಿಸುತ್ತವೆ.

        ಪುಸ್ತಕಮನೆ

       ಹರಿಹರಪ್ರಿಯ

Writer - ಡಾ. ನಾ.ದಾಮೋದರ ಶೆಟ್ಟಿ

contributor

Editor - ಡಾ. ನಾ.ದಾಮೋದರ ಶೆಟ್ಟಿ

contributor

Similar News