ಜು.21ರಿಂದ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ: ಡಾ.ಎಚ್.ಸಿಮಹದೇವಪ್ಪ
ಬೆಂಗಳೂರು, ಜು.16: ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೋಮುವಾದಿಗಳಿಂದ ರಕ್ಷಿಸಲು ಜು.21ರಿಂದ ಮೂರು ದಿನಗಳ ಕಾಲ ನಗರದ ಜಿಕೆವಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿಮಹದೇವಪ್ಪ ತಿಳಿಸಿದ್ದಾರೆ.
ರವಿವಾರ ಜಿಕೆವಿಕೆ ಆವರಣದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉದ್ಘಾಟನೆಯನ್ನು ಮಾನವ ಹಕ್ಕುಗಳ ವಕೀಯ ಮಾರ್ಟಿನ್ ಲೂಥರ್ ಕಿಂಗ್-3, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
‘ಸಾಮಾಜಿಕ ನ್ಯಾಯದ ಮರು ಸ್ಥಾಪನೆ ಹಾಗೂ ಅಂಬೇಡ್ಕರ್ ಪುನಾವಲೋಕನ’ ಕುರಿತ ಈ ಸಮ್ಮೇಳನದಲ್ಲಿ 83 ಮಂದಿ ಅಂತಾರಾಷ್ಟ್ರೀಯ, 149 ಮಂದಿ ರಾಷ್ಟ್ರೀಯ ಹಾಗೂ 80 ಮಂದಿ ರಾಜ್ಯದ ವಿವಿಧ ಕ್ಷೇತ್ರದ ಭಾಷಣಕಾರರನ್ನು ಆಹ್ವಾನಿಸಲಾಗುತ್ತಿದೆ ಎಂದ ಅವರು, 2 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು. ಸಮ್ಮೇಳನಕ್ಕಾಗಿ ಆರು ಕಡೆ ಒಟ್ಟು 12 ದುಂಡು ಮೇಜಿನ ಸಭೆ ನಡೆಸಲು ವ್ಯವಸ್ಥೆ ಕಲ್ಪಿಸಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಉಪಹಾರ, ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ ಎಂದು ಮಹದೇವಪ್ಪ ಹೇಳಿದರು.
20 ಕೋಟಿ ರೂ.ವೆಚ್ಚ: ಭಾರತದ ಇತಿಹಾಸದಲ್ಲೆ ದಾಖಲಾಗುವ ಈ ಸಮ್ಮೇಳನಕ್ಕೆ 20ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ದೇಶದ 13 ಪ್ರಮುಖ ವಿಶ್ವ ವಿದ್ಯಾಲಯಗಳಲ್ಲಿಯೂ ವೆಬ್‌ಕ್ಯಾಸ್ಟ್ ಮೂಲಕ ನೇರ ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಮೊದಲ ಬಾರಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿದ್ದು, ಬಹು ಸಂಸ್ಕೃತಿಯ ದೇಶದಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಇಲಾಖೆ ಸಲಹೆಗಾರ ಇ.ವೆಂಕಟಯ್ಯ, ಕೃಷಿ ವಿವಿ ಕುಲಪತಿ ಶಿವಣ್ಣ, ಬೆಂ.ಕೇಂದ್ರಿಯ ವಿವಿ ವಿಶೇಷಾಧಿಕಾರಿ ಪ್ರೊ.ಎಸ್. ಜಾಫೆಟ್ ಉಪಸ್ಥಿತರಿದ್ದರು.