×
Ad

ಕರ್ನಾಟಕದಿಂದ ಗೋವಾಕ್ಕೆ ಮಹಾದಾಯಿ ನೀರು; ಮಾಧ್ಯಮ ವರದಿ ತಪ್ಪು: ಸಚಿವ ಎಂಬಿ.ಪಾಟೀಲ್

Update: 2017-07-17 15:40 IST

ಬೆಂಗಳೂರು, ಜು.17: ಕರ್ನಾಟಕದಿಂದ ಗೋವಾಕ್ಕೆ ಇಂಜಿನಿಯರ್‌ಗಳು ಮಹಾದಾಯಿ ನೀರು ಹರಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ಬಿತ್ತರಿಸಿರುವ ವರದಿಗಳು ತಪ್ಪು. ಮಹಾದಾಯಿ ವಿವಾದ ಬಹಳ ಸೂಕ್ಷ್ಮ ವಿಚಾರ. ಈ ಕುರಿತು ವರದಿ ಮಾಡುವಾಗ ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಬೇಕಿತ್ತು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅರವಿಂದ್ ಕುಲಕರ್ಣಿ ಎಂಬವರು ಮಹಾದಾಯಿ ಟನಲ್ ಹತ್ತಿರ ಗೋವಾಕ್ಕೆ ನೀರು ಹರಿಯುತ್ತಿದೆ ಎಂದು ಮಾಧ್ಯಮದವರಿಗೆ ತೋರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮಹಾದಾಯಿ ನೀರಿನ ಕುರಿತಂತೆ ನಾಲ್ಕು ಜಿಲ್ಲೆಗಳ ಜನತೆ ಹೋರಾಟ ಮಾಡ್ತಿದ್ದಾರೆ. ಈ ನಡುವೆ ಇಂತಹ ತಪ್ಪಾಗಿ ಬಿಂಬಿತವಾಗಿರುವ ವರದಿಗಳಿಂದ ಮತ್ತೆ ಜನ ಗಲಾಟೆ ಮಾಡಿದರೆ ಯಾರು ಹೊಣೆ? ಆದ್ದರಿಂದ ಇಂತಹ ವರದಿ ಮಾಡುವಾಗ ಮಾಧ್ಯಮಗಳು ನಮ್ಮನ್ನ ಸಂಪರ್ಕಿಸಿದ್ದಾರೆ ಸೂಕ್ತವಾಗಿರುತ್ತಿತ್ತು ಎಂದವರು ಅಭಿಪ್ರಾಯಿಸಿದರು. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ ಸರಕಾರ ಇನ್ನು ಆಶಾಭಾವ ಹೊಂದಿದೆ. ಮುಂಗಾರು ಚುರುಕುಗೊಳ್ಳಲಿದೆ ಎಂದು ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ಸಚಿವರು ತಿಳಿಸಿದರು.
            
ಸದ್ಯ ಅಣೆಕಟ್ಟುಗಳಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಯಾವ ಕೆಲಸಕ್ಕೆ ಬಳಸಬೇಕೆಂದು ಸರಕಾರ ಚಿಂತಿಸಿಲ್ಲ. ಆದರೆ ಮಳೆ ಪ್ರಮಾಣ ಕಡಿಮೆಯಾದರೆ ಮೊದಲ ಆದತ್ಯೆ ಕುಡಿಯುವ ನೀರಿಗೆ. ಕೃಷಿಗೆ ನೀರು ಹರಿಸುವುದು ಎರಡನೆ ಆದತ್ಯೆಯಾಗಿರುತ್ತದೆ ಎಂದವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ವಿನಯ್ ಕುಲಕರ್ಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News