ಹಣಕ್ಕೆ ಬೇಡಿಕೆ: ಸಂಘಟನೆಗಳ ಅಧ್ಯಕ್ಷರು ಸೇರಿ 11 ಜನರ ಬಂಧನ
ಬೆಂಗಳೂರು, ಜು.17: ಕನ್ನಡ ಧ್ವಜದ ಚಪ್ಪಲಿ ಇದೆ ಎಂದು ಬಾಟಾ ಶೋರಂ ಮಾಲಕನಿಗೆ 5 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಸಂಘಟನೆಗಳ ಅಧ್ಯಕ್ಷರು ಸೇರಿ 11 ಜನರನ್ನು ಇಲ್ಲಿನ ಜೆಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಕಾರ್ಮಿಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಶ್, ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ಸಿ.ಟಿ.ಪ್ರದೀಪ್‌ನಾಯ್ಕಾ, ಸುವರ್ಣ ಕರ್ನಾಟಕ ವೇದಿಕೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಾಗರಾಜು, ಕರ್ನಾಟಕ ಸುವರ್ಣ ವೇದಿಕೆ ರಾಜ್ಯಾಧ್ಯಕ್ಷ ವೀರೇಶ್ ಸೇರಿ 11 ಜನ ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಜೆಪಿ ನಗರದಲ್ಲಿರುವ ಬಾಟಾ ಶೋರಂ ಮಾಲಕರಿಗೆ ನಿನ್ನ ಅಂಗಡಿಯಲ್ಲಿ ಕನ್ನಡ ಧ್ವಜದ ಚಪ್ಪಲಿ ಇದೆ. ನೀನು 5 ಲಕ್ಷ ರೂ. ನೀಡದಿದ್ದಲ್ಲಿ ಪ್ರತಿಭಟಿಸಲಾಗುವುದೆಂದು ಬೆದರಿಕೆ ಹಾಕಿದ್ದರು. ಈ ಸಂಬಂಧ ಶೋರಂ ಮಾಲಕ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.