ನಿವೇಶನದಾರರಿಗೆ ನಿಯಮ ಬಾಹಿರ ಖಾತ ಹಂಚಿಕೆ : ಕಂದಾಯ ಅಧಿಕಾರಿಗಳಿಬ್ಬರಿಗೆ ತಲಾ 50 ಸಾವಿರ ದಂಡ
ಬೆಂಗಳೂರು, ಜು.17: ಆನೇಕಲ್ ತಾಲೂಕಿನ ಕಲ್ಲುಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನದಾರರಿಗೆ ನಿಯಮ ಬಾಹಿರವಾಗಿ ಖಾತ ಹಂಚಿಕೆ ಮಾಡಿದ್ದ ಆರೋಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಬ್ಬರಿಗೆ ತಲಾ 50 ಸಾವಿರ ರೂ.ಗಳನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಬಳಿ ಠೇವಣಿ ಇಡಲು ಹೈಕೋರ್ಟ್ ನಿರ್ದೇಶಿಸಿದೆ.
ತಮ್ಮ ನಿವೇಶನಕ್ಕೆ ಇ-ಖಾತ ಬದಲಾಗಿ ಕೈ ಬರಹದ ಮೂಲಕ ಸಿದ್ಧಪಡಿಸಿದ್ದ ಖಾತ(ಮ್ಯಾನುಯಲ್) ಹಂಚಿಕೆ ಮಾಡಿದ್ದ ಕ್ರಮ ಪ್ರಶ್ನಿಸಿ ಜಿಗಣಿ ಗ್ರಾಮದ ಭಾರತಮ್ಮ ಎಂಬುವರು ಸೇರಿದಂತೆ ಮತ್ತಿತರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಲ್ಲುಬಾಳು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ 50 ಸಾವಿರ ರೂ. ಠೇವಣಿ ಇಡುವಂತೆ ನಿರ್ದೇಶಿಸಿದೆ.
ಅಲ್ಲದೆ, ಮುಂದಿನ ವಿಚಾರಣೆ ವೇಳೆ ಇಬ್ಬರೂ ಅಧಿಕಾರಿಗಳು ನ್ಯಾಯಪೀಠದಲ್ಲಿ ಹಾಜರಿರಬೇಕು. ಆ ಸಂದರ್ಭದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಂದ ಠೇವಣಿ ರೂಪದಲ್ಲಿ ಪಡೆದ ಮೊತ್ತವನ್ನು ಅರ್ಜಿದಾರರಿಗೆ ಪರಿಹಾರವಾಗಿ ಏಕೆ ನೀಡಬಾರದು ಎಂಬುದಕ್ಕೆ ಸ್ಪಷ್ಟಣೆ ನೀಡಲಾಗುವುದು ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಜು.28ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಭಾರತಮ್ಮ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಹರಪನಹಳ್ಳಿಯ ನಿಸರ್ಗ ಬಡಾವಣೆಯ ಸರ್ವೇ ನಂಬರ್ 25ರಲ್ಲಿ ನಿವೇಶನ ಖರೀದಿಸಿರುತ್ತಾರೆ. ಈ ನಿವೇಶನಕ್ಕೆ ಖಾತೆ ಮಾಡಿಕೊಡುವ ಸಂದರ್ಭದಲ್ಲಿ ಸ್ಥಳೀಯ ಪಿಡಿಒ ಇ- ಖಾತ ಬದಲಾಗಿ ಮ್ಯಾನುಯಲ್ ಖಾತೆ ನೀಡಿರುತ್ತಾರೆ.
ಈ ಪ್ರತಿಯನ್ನು ಪಡೆದಿದ್ದ ಅರ್ಜಿದಾರರು ನಿವೇಶನದಲ್ಲಿ ಮನೆ ನಿರ್ಮಿಸಲು ಸಾಲ ಪಡೆಯಲು ಬ್ಯಾಂಕ್‌ಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಇ-ಖಾತೆ ಇಲ್ಲದ ಪರಿಣಾಮ ಸಾಲ ನೀಡಲು ಬ್ಯಾಂಕ್ ನಿರಾಕರಿಸುತ್ತದೆ. ಇದರಿಂದಾಗಿ ಇ-ಖಾತ ನೀಡಿದ್ದ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.