×
Ad

ಸಫಾಯಿ ಕರ್ಮಚಾರಿ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

Update: 2017-07-17 21:46 IST

ಬೆಂಗಳೂರು, ಜು.17: ಶೌಚ ಸಂಗ್ರಹಿತ ಗುಂಡಿಗಳನ್ನು ಮನುಷ್ಯರಿಂದ ಸ್ವಚ್ಛಗೊಳಿಸುವ ಪದ್ಧತಿ ಅನುಸರಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಫಾಯಿ ಕರ್ಮಚಾರಿ ಆಯೋಗ ನೀಡಿರುವ ಆದೇಶ ಪ್ರಶ್ನಿಸಿದ್ದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ರಾಮ್ಕೆಯಾನಿಸ್ಕ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈ ಕುರಿತಂತೆ ಇನ್ಸ್‌ಟಿಟ್ಯೂಟ್‌ನ ಹಿರಿಯ ವಿಜ್ಞಾನಿ ಮತ್ತು ಎಸ್ಟೇಟ್ ಅಧಿಕಾರಿಯೂ ಆದ ರಾಜನ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಈ ವಿಚಾರಣೆ ನಡೆಸಿತು. ಆಯೋಗದ ಆದೇಶಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ವಿಚಾರಣೆ ನಡೆಸಿದರೆ ಅದು ಅವಸರದ ಕ್ರಮ ಎನಿಸುತ್ತದೆ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿ ವಜಾ ಮಾಡಿದೆ.

 ಕೋಲಾರ ಚಿನ್ನದ ಗಣಿ (ಕೆಜಿಎಫ್) ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗಕ್ಕೆ ಸೇರಿದ ವಸತಿ ಪ್ರದೇಶದಲ್ಲಿ ಶೌಚಗುಂಡಿಗಳಲ್ಲಿ ಶೇಖರಣೆಯಾಗಿರುವ ಮಲವನ್ನು ಮನುಷ್ಯರಿಂದ ತೆರವುಗೊಳಿಸುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

 ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಈ ದೂರು ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಫಾಯಿ ಕರ್ಮಚಾರಿ ಆಯೋಗವು, ಅರ್ಜಿದಾರರ ವಿರುದ್ಧ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲು ಮಾಡಬೇಕು ಎಂದು 2017ರ ಜೂನ್ 9ರಂದು ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News