ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಿ

Update: 2017-07-17 18:25 GMT

ಮಾನ್ಯರೆ,

ಶಾಲಾ-ಕಾಲೇಜುಗಳ ಅಭಿವೃದ್ಧಿ ಮತ್ತು ಶಿಕ್ಷಣದ ಏಳಿಗೆಗಾಗಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಜರೂರು ಖಂಡಿತ ಇದೆ.

ಆಡಳಿತ ಮಂಡಳಿಯ ವೈಫಲ್ಯ ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಿಂದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ, ಡೊನೇಶನ್ ಹಾವಳಿಯನ್ನು ನಿಯಂತ್ರಿಸಲು ಈ ಹಿಂದೆ ವಿದ್ಯಾರ್ಥಿ ಚುನಾವಣೆಗಳು ಸಹಕಾರಿಯಾಗಿದ್ದವು. ಅಷ್ಟೇ ಅಲ್ಲ. ಈ ಹಿಂದೆ ಚುನಾಯಿತ ಸಂಘಟನೆಗಳು, ಶೈಕ್ಷಣಿಕ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ಸರಕಾರದ ಮಟ್ಟದಲ್ಲಾಗುವ ತಪ್ಪುಗಳನ್ನು ಗುರುತಿಸಿ ವಿದ್ಯಾರ್ಥಿಗಳ ಹಿತ ಕಾಪಾಡಿದ್ದವು. ಆದರೆ 2002ರಲ್ಲಿ ಕರ್ನಾಟಕ ರಾಜ್ಯದಲ್ಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ರದ್ದುಗೊಳಿಸುವ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡಿದರು. ವಿದ್ಯಾರ್ಥಿ ಚುನಾವಣೆಗಳು ರಾಜಕೀಯ ಪ್ರೇರಿತ ಹಾಗೂ ಹಿಂಸೆಗೆ ದಾರಿ ಮಾಡಿಕೊಡುತ್ತವೆೆ. ಚುನಾವಣೆಗಳಲ್ಲ್ಲಿ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂಬ ಕುಂಟು ನೆಪಗಳು ಚುನಾವಣೆಗಳನ್ನು ನಿಷೇಧಿಸಲು ಕಾರಣವಾಗಿತ್ತು. ಚುನಾವಣೆಗಳಲ್ಲಿ ನಿಜವಾಗಿಯೂ ದೋಷಗಳಿದ್ದರೆ, ಅವುಗಳನ್ನು ಸರಿಪಡಿಸಬೇಕಿತ್ತು. ಬದಲಾಗಿ ಚುನಾವಣೆಯನ್ನೇ ನಿಷೇಧಿಸಿ, ವಿದ್ಯಾರ್ಥಿಗಳನ್ನು ರಾಜಕೀಯ ಚಿಂತನೆಯಿಂದ ದೂರ ಉಳಿಸಬೇಕೆನ್ನುವ ನಿರ್ಧಾರ ಸರಿಯಲ್ಲ.

ಹಿಂದಿನಿಂದಲೂ ವಿದ್ಯಾರ್ಥಿ ನಾಯಕರಾಗಿದ್ದವರು ರಾಜಕೀಯಕ್ಕೆ ಪ್ರವೇಶಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಕಾಲೇಜ್ ಕ್ಯಾಂಪಸ್‌ನಿಂದ ಬಂದ ಸೀತಾರಾಮ್ ಯೆಚೂರಿಯವರು ದೇಶದ ರಾಜಕೀಯ ಮುತ್ಸದ್ದಿಯಾಗಿ, ಪಕ್ಷವೊಂದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಇಂದು ರಾಜ್ಯಸಭಾ ಸದಸ್ಯರಾಗಿ ಆಡಳಿತಾರೂಢ ಪಕ್ಷವನ್ನು ಸದಾ ಎಚ್ಚರಿಸುತ್ತಾ, ಜನರ ನಾಡಿಮಿಡಿತವಾಗಿದ್ದಾರೆ. ಅದೇ ರೀತಿಯಾಗಿ ಪಶ್ಚಿಮ ಬಂಗಾಳವನ್ನು ಮೂರು ದಶಕಗಳ ಕಾಲ ಭ್ರಷ್ಟಾಚಾರ ಆರೋಪ ಬರದಂತೆ ಸುದೀರ್ಘವಾಗಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಜ್ಯೋತಿಬಸು, ಪ್ರಸ್ತುತ 5ನೆ ಬಾರಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ, ಅತ್ಯಂತ ಸರಳ ಜೀವನ ಅಳವಡಿಸಿಕೊಂಡು ದೇಶದ ಅತೀ ಬಡ ಮುಖ್ಯಮಂತ್ರಿ ಎಂದೇ ಕರೆಯಲ್ಪಡುವ ಮಾಣಿಕ್ ಸರ್ಕಾರ್ ಹಾಗೂ ದೇಶದಲ್ಲೇ ಉತ್ತಮ ಆಡಳಿತ ನೀಡುವಲ್ಲಿ ಮೊದಲನೆ ಸ್ಥಾನ ಗಳಿಸಿದಂತಹ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕದ ಬಾಗೇಪಲ್ಲಿಯಿಂದ 2 ಬಾರಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ, ಮಾಜಿ ಸಂಸದೆ ತೇಜಸ್ವಿನಿಗೌಡ, ಎನ್‌ಡಿಎ ಕೇಂದ್ರ ಸಚಿವ ಅನಂತಕುಮಾರ್, ಪ್ರಹ್ಲ್ಲಾದ್ ಜ್ಯೋಶಿ ಅಲ್ಲದೆ ಇತ್ತೀಚೆಗೆ ಭಾರತದ ಪ್ರಜ್ಞಾವಂತರ ಮೆಚ್ಚುಗೆ ಗಳಿಸಿದ ಜೆಎನ್‌ಯು ವಿವಿ ಅಧ್ಯಕ್ಷ ಕನ್ನಯ್ಯೋ ಕುಮಾರ್ ಸೇರಿದಂತೆ ಅನೇಕರು ಕ್ಯಾಂಪಸ್ ರಾಜಕೀಯದಿಂದಲೇ ಉತ್ತಮ ನಾಯಕರಾಗಿ ಹೊರ ಬಂದಿದ್ದಾರೆ ಎಂಬುದನ್ನು, ನಾವು ಇತಿಹಾಸದಿಂದ ಅರಿಯಬೇಕಿರುವ ಸತ್ಯವಾಗಿದೆ. ಆದ್ದರಿಂದ ದೇಶವನ್ನು ಸಮರ್ಥವಾಗಿ ನಿಭಾಯಿಸಬಲ್ಲಂತಹ ನಾಯಕರನ್ನು ತಯಾರು ಮಾಡುವ ಕಾರ್ಖಾನೆ ವಿವಿ ಚುನಾವಣೆಯಾಗಿದೆ.
ನ್ಯಾಯಮೂರ್ತಿ ಲಿಂಗ್ಡೋ ಸಮಿತಿ ನೀಡಿರುವ ಶಿಫಾರಸನ್ನು ಒಪ್ಪಿ, ಅದರಂತೆ ಚುನಾವಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದಾಗಲೂ ಅದನ್ನು ಜಾರಿ ಮಾಡದಿರುವುದು ನ್ಯಾಯಾಲಯಕ್ಕೆ ಮಾಡಿದ ಅಪಮಾನವಾಗಿದೆ. ಈಗ ಶಾಲಾ-ಕಾಲೇಜುಗಳಲ್ಲಿ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಈ ಮಾದರಿಯ ಆಯ್ಕೆ ಅತ್ಯಂತ ಅಪಾಯಕಾರಿ ಪದ್ಧತಿಯಾಗಿದೆ. ಇಂತಹ ಪದ್ಧತಿಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ. ಪ್ರತಿನಿಧಿಗಳ ಆಯ್ಕೆಗೆ ಚುನಾವಣೆಯೇ ಮದ್ದು ಎಂದು ನ್ಯಾಯಮೂರ್ತಿ ಲಿಂಗ್ಡೋ ಸಮಿತಿ ಶಿಫಾರಸು ಮಾಡಿತ್ತು. ಆದ್ದರಿಂದ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಎತ್ತ್ತಿ ಹಿಡಿಯಬೇಕಿದೆ. ಸಂವಿಧಾನ ಒಪ್ಪುವ ಪ್ರಜ್ಞಾವಂತರು ಹಾಗೂ ವಿದ್ಯಾರ್ಥಿ-ಯುವಜನರು, ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಐಕ್ಯ ಚಳವಳಿಯಿಂದ ಚುನಾವಣೆಗೆ ಒತ್ತಾಯಿಸಬೇಕಿದೆ.

Writer - -ರಮೇಶ ವೀರಾಪುರ್, ರಾಯಚೂರು

contributor

Editor - -ರಮೇಶ ವೀರಾಪುರ್, ರಾಯಚೂರು

contributor

Similar News