ಅರ್ಜೆಂಟೀನ ವಿರುದ್ಧ ಭಾರತದ ಮಹಿಳೆಯರಿಗೆ 0-3 ಸೋಲು

Update: 2017-07-17 18:35 GMT

ಜೋಹಾನ್ಸ್‌ಬರ್ಗ್, ಜು.17: ಇಲ್ಲಿ ನಡೆದ ಮಹಿಳೆಯರ ವಿಶ್ವ ಹಾಕಿ ಲೀಗ್ ಸೆಮಿಫೈನಲ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಅರ್ಜೆಂಟೀನ ವಿರುದ್ಧ 0-3 ಅಂತರದಲ್ಲಿ ಶರಣಾಗಿದೆ.

ನಂ.3 ಅರ್ಜೆಂಟೀನ ತಂಡ ಸುಲಭವಾಗಿ ಭಾರತಕ್ಕೆ ಸೋಲುಣಿಸಿತು. ಭಾರತ ಜುಲೈ 18ರಂದು ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.
ಅಜೆಂಟೀನ ತಂಡ ರವಿವಾರ ನಡೆದ ಪಂದ್ಯದಲ್ಲಿ 2ನೆ ನಿಮಿಷದಲ್ಲಿ ಗೋಲು ಖಾತೆ ತೆರೆದಿತ್ತು. ರಾಸಿಯೊ ಸಾಂಕೆಝ್ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆಗೆ ನೆರವಾಗಿದ್ದರು.

 ಭಾರತದ ಗೋಲು ಕೀಪರ್ ಸವಿತಾ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿ ಅರ್ಜೆಂಟೀನದ ಗೋಲು ಪ್ರಯತ್ನವನ್ನು ತಡೆಯುವಲ್ಲಿ ವಿಫಲರಾದರು. ಸಾಂಕೆಝ್ ಆರಂಭದಲ್ಲಿ ಗೋಲು ಗಳಿಸುವ ಯತ್ನವನ್ನು ಸವಿತಾ ತಡೆದರು. ಆದರೆ ಮರಳಿ ಮಾಡಿದ ಯತ್ನದಲ್ಲಿ ಯಶಸ್ಸು ಸಾಧಿಸಿದರು.
ಭಾರತದ ವಂದನಾ ಕಟೇರಿಯಾ ಅವರು ನಮಿತಾ ಟೊಪೊ ನೆರವಿನಲ್ಲಿ ಗೋಲು ಗಳಿಸಲು ಯತ್ನ ನಡೆಸಿದರು. ಆದರೆ ವಂದನಾಗೆ ಸಮಬಲ ಸಾಧಿಸಲು ಅರ್ಜೆಂಟೀನದ ಗೋಲು ಕೀಪರ್ ಅವಕಾಶ ನೀಡಲಿಲ್ಲ.

ಗೋಲು ಕೀಪರ್ ಸವಿತಾ 15 ನಿಮಿಷಗಳ ಅವಧಿಯಲ್ಲಿ ಅರ್ಜೆಂಟೀನ ಆಟಗಾರ್ತಿಯರು 4 ಬಾರಿ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದರು.ಅರ್ಜೆಂಟೀನಕ್ಕೆ 6ನೆ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಗೋಲು ಪೆಟ್ಟಿಗೆಯತ್ತ ಚೆಂಡು ಸಾಗದಂತೆ ನಮಿತಾ ತಡೆದರು.
14ನೆ ನಿಮಿಷದಲ್ಲಿ ಮಾರಿಯೊ ಗ್ರೆಂಟ್ಟೊ ಅರ್ಜೆಂಟೀನದ ಖಾತೆಗೆ ಎರಡನೆ ಗೋಲು ಜಮೆ ಮಾಡಿದರು. ಇದರೊಂದಿಗೆ ಅರ್ಜೆಂಟೀನ 2-0 ಮುನ್ನಡೆ ಸಾಧಿಸಿತು.

   23ನೆ ನಿಮಿಷದಲ್ಲಿ ಭಾರತಕ್ಕೆ ಒಲಿದು ಬಂದ ಪೆನಾಲ್ಟಿ ಕಾರ್ನರ್ ಅವಕಾಶ ವ್ಯರ್ಥಗೊಂಡಿತು. ರಾಣಿ ಪ್ರಯತ್ನ ಫಲ ನೀಡಲಿಲ್ಲ. 25ನೆ ನಿಮಿಷದಲ್ಲಿ ಸುಶೀಲಾ ಮಾಡಿದ ಎಡವಟ್ಟಿನಿಂದಾಗಿ ಅರ್ಜೆಂಟೀನಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ನೊಯೆಲ್ ಬಾರಿಯೊನುವೊ ಗೋಲು ಜಮೆ ಮಾಡಿದರು. 3-0 ಮುನ್ನಡೆಯೊಂದಿಗೆ ಅರ್ಜೆಂಟೀನದ ಆಟಗಾರ್ತಿಯರು ಭಾರತದ ಆಟಗಾರ್ತಿಯರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿದರು.
34ನೆ ನಿಮಿಷದಲ್ಲಿ ಎರಡು ಪೆನಾಲ್ಟಿ ಅವಕಾಶಗಳು ಅರ್ಜೆಂಟೀನಕ್ಕೆ ಸಿಕ್ಕಿತ್ತು. ಆದರೆ ಗೋಲು ಗಳಿಸಲು ಭಾರತದ ಆಟಗಾರ್ತಿಯರು ಬಿಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News