ಆಂಗ್ಲರ ವಿರುದ್ಧ ಹರಿಣ ಪಡೆಗೆ ಭರ್ಜರಿ ಜಯ

Update: 2017-07-17 18:48 GMT

ಟ್ರೆಂಟ್ ಬ್ರಿಡ್ಜ್, ಜು.17: ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಇಂದು ದಕ್ಷಿಣ ಆಫ್ರಿಕ 340 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಇದರೊಂದಿಗೆ 4 ಟೆಸ್ಟ್‌ಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ದಕ್ಷಿಣ ಆಫ್ರಿಕ ಇದರೊಂದಿಗೆ ಟ್ರೆಂಟ್ ಬ್ರಿಡ್ಜ್ ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.

 ಪಂದ್ಯದ ನಾಲ್ಕನೆ ದಿನವಾಗಿರುವ ಸೋಮವಾರ ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 474 ರನ್‌ಗಳ ಗೆಲುವಿನ ಸವಾಲು ಪಡೆದ ಇಂಗ್ಲೆಂಡ್ ತಂಡ ಫಿಲ್ಯಾಂಡರ್(24ಕ್ಕೆ 3), ಕೇಶವ್ ಮಹಾರಾಜ್(42ಕ್ಕೆ 3), ಒಲಿವರ್ (25ಕ್ಕೆ2) ಮತ್ತು ಕ್ರಿಸ್ ಮೊರಿಸ್(7ಕ್ಕೆ 2) ದಾಳಿಗೆ ಸಿಲುಕಿ 44.2 ಓವರ್‌ಗಳಲ್ಲಿ 133 ರನ್‌ಗಳಿಗೆ ಆಲೌಟಾಗಿದೆ. ಇಂಗ್ಲೆಂಡ್ ತಂಡದ ಯಾರಿಗೂ ಅರ್ಧಶತಕದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆರಂಭಿಕ ದಾಂಡಿಗ ಹಾಗೂ ಮಾಜಿ ನಾಯಕ ಅಲೆಸ್ಟೈರ್ ಕುಕ್ 42 ರನ್ (121ನಿ, 76ಎ, 6ಬೌ) ಗಳಿಸಿರುವುದು ತಂಡದ ಪರ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಮೊದಲ ದಿನ 4 ಓವರ್‌ಗಳಲ್ಲಿ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 1 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಕುಕ್ ಮತ್ತು ಜೆನ್ನಿಂಗ್ಸ್ ಖಾತೆ ತೆರೆಯದೆ ನಾಲ್ಕನೆ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದ್ದಿರಿಸಿದ್ದರು.

   ಇಂಗ್ಲೆಂಡ್‌ನ ಆರಂಭ ಚೆನ್ನಾಗಿರಲಿಲ್ಲ.ಡ್ರಾ ಸಾಧಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದರೂ ಫಲ ನೀಡಲಿಲ್ಲ.5.5 ಓವರ್‌ಗಳಲ್ಲಿ ಕೇವಲ 4 ರನ್ ಸೇರಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಜೆನ್ನಿಂಗ್ಸ್ (3)ವಿಕೆಟ್ ಕಳೆದುಕೊಂಡಿತು. ಊಟದ ವಿರಾಮದ ಮೊದಲು ಇಂಗ್ಲೆಂಡ್ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಬ್ಯಾಲೆನ್ಸ್ (4), ನಾಯಕ ರೂಟ್(8) ಮತ್ತು ಕುಕ್(42) ಔಟಾದಾಗ ತಂಡದ ಸ್ಕೋರ್ 24.2 ಓವರ್‌ಗಳಲ್ಲಿ 72 ಆಗಿತ್ತು.

ವಿಕೆಟ್ ಕೀಪರ್ ಬೈರ್‌ಸ್ಟೋವ್ (16), ಬೆನ್ ಸ್ಟೋಕ್ಸ್(18) ಮತ್ತು ಎಂಎಂ ಅಲಿ(27) ಎರಡಂಕಿಯ ಸ್ಕೋರ್ ದಾಖಲಿಸಿ ಹೋರಾಟ ನಡೆಸಿದರು. ಕ್ರಿಸ್ ಬ್ರಾಡ್ 5 ರನ್ ಗಳಿಸಿದರು. ಮಾರ್ಕ್ ವುಡ್(0) ಮತ್ತು ಆ್ಯಂಡರ್ಸನ್(0) ಅವರನ್ನು ಖಾತೆ ತೆರೆಯಲು ಒಲಿವಿಯರ್ ಬಿಡಲಿಲ್ಲ. ಡಾವ್ಸನ್ ಔಟಾಗದೆ 5 ರನ್ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 54 ರನ್ ಮತ್ತು 48ಕ್ಕೆ 2 ವಿಕೆಟ್ ಹಾಗೂ ಎರಡನೆ ಇನಿಂಗ್ಸ್‌ನಲ್ಲಿ 42 ರನ್ ಮತ್ತು 10ಓವರ್‌ಗಳಲ್ಲಿ 24ಕ್ಕೆ 3 ವಿಕೆಟ್ ಪಡೆದ ಆಲ್‌ರೌಂಡರ್ ಫಿಲ್ಯಾಂಡರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಸಂಕ್ಷಿಪ್ತ ಸ್ಕೋರ್ ವಿವರ

►ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 335
►ಇಂಗ್ಲೆಂಡ್ ಮೊದಲ ಇನಿಂಗ್ಸ್ 205
►ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್ 343/9
►ಇಂಗ್ಲೆಂಡ್ ಎರಡನೆ ಇನಿಂಗ್ಸ್ 44.2 ಓವರ್‌ಗಳಲ್ಲಿ ಆಲೌಟ್ 133(ಕುಕ್ 42,ಎಂಎಂ ಅಲಿ 27; ಫಿಲ್ಯಾಂಡರ್ 24ಕ್ಕೆ 3, ಮಹಾರಾಜ್ 42ಕ್ಕೆ 3).
►ಪಂದ್ಯಶ್ರೇಷ್ಠ :ವೆರ್ನಾನ್ ಫಿಲ್ಯಾಂಡರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News