ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ

Update: 2017-07-18 11:49 GMT

ಹೊಸದಿಲ್ಲಿ, ಜು.18: ಬಿಜೆಪಿಯ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ , ಮಾಜಿ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರಿಂದು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತನ್ನನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ನಾಯ್ಡು ಈ ಸಂದರ್ಭ ತಿಳಿಸಿದರು.

ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಘನತೆಗೆ ನ್ಯಾಯ ಒದಗಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸಚಿವ ಹುದ್ದೆಗೆ ನಾಯ್ಡು ರಾಜೀನಾಮೆ ನೀಡಿದ್ದರು. ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ಪ್ರಮುಖರಾದ ಲಾಲ್‌ಕೃಷ್ಣ ಅಡ್ವಾಣಿ, ,ಮುರಳಿ ಮನೋಹರ್ ಜೋಷಿ ಉಪಸ್ಥಿತರಿದ್ದರು.

    ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿರುವುದು ನನಗೆ ದೊರೆತ ಗೌರವವಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ. ಉಪರಾಷ್ಟ್ರಪತಿ ಹುದ್ದೆಗೆ ತನ್ನದೇ ಆದ ಕಾರ್ಯಾತ್ಮಕ ಸಂಪ್ರದಾಯವಿದೆ. ಈ ಹುದ್ದೆಗೆ ನಾನು ನ್ಯಾಯ ಒದಗಿಸಬಲ್ಲೆ ಎಂಬ ಭರವಸೆಯಿದೆ ಎಂದು ನಾಮಪತ್ರ ಸಲ್ಲಿಸಿದ ಬಳಿಕ ನಾಯ್ಡು ಮಾಧ್ಯಮದವರಿಗೆ ತಿಳಿಸಿದರು. ಎಳೆಯ ಪ್ರಾಯದಲ್ಲೇ ತಾಯಿಯನ್ನು ಕಳೆದುಕೊಂಡ ಬಳಿಕ ನನ್ನ ಪಕ್ಷವನ್ನು ಮಾತೃಸಮಾನವಾಗಿ ಕಂಡಿದ್ದೇನೆ. ಪಕ್ಷದವರೇ ನನ್ನನ್ನು ಈ ಎತ್ತರಕ್ಕೆ ಬೆಳೆಸಿದ್ದಾರೆ.ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಿರುವ ಈ ಸಂದರ್ಭದಲ್ಲಿ ಪಕ್ಷವನ್ನು ಪ್ರತಿನಿಧಿಸಲು ಅವಕಾಶ ಇಲ್ಲ ಎಂಬುದು ನೋವಿನ ಸಂಗತಿ. ಆದರೆ ಈ ಹಿಂದೆ ಹುದ್ದೆಯನ್ನು ಅಲಂಕರಿಸಿದ ಮಹನೀಯರು ಹಾಕಿಕೊಟ್ಟ ಆದರ್ಶವನ್ನು ಮುಂದುವರಿಸುವ ಭರವಸೆಯಿದೆ ಎಂದವರು ನುಡಿದರು.

   2019ರಲ್ಲಿ ಮೋದಿಯವರು ಪ್ರಧಾನಿಯಾಗುವುದನ್ನು ನೋಡಬೇಕು. ಆ ಬಳಿಕ ರಾಜಕೀಯ ತ್ಯಜಿಸಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿತ್ತು ಮತ್ತು ಇದನ್ನು ಸಹೋದ್ಯೋಗಿಗಳಲ್ಲಿ ಹೇಳಿಕೊಂಡಿದ್ದೆ. ಆದರೆ ವಿಧಿಲಿಖಿತ ಬೇರೆಯೇ ಆಗಿದೆ. ಈಗ ಪಕ್ಷದಿಂದ ಹೊರಬಂದಿದ್ದೇನೆ. ಈಗ ಭಾವೋದ್ವೇಗದಿಂದ ಗಂಟಲುಬ್ಬಿ ಬರುತ್ತಿದೆ ಎಂದು ನಾಯ್ಡು ನುಡಿದರು.

ಆಂಧ್ರಪ್ರದೇಶದವರಾದ ವೆಂಕಯ್ಯ ನಾಯ್ಡು, ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜಸ್ತಾನದ ಬಾರ್ಮರ್ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ನಾಯ್ಡು ಬಿಜೆಪಿಯ ಜನಪ್ರಿಯ ನಾಯಕರಲ್ಲಿ ಒಬ್ಬರು. ರೈತನ ಮಗ ಎಂದು ಇವರನ್ನು ಮೋದಿ ಬಣ್ಣಿಸಿದ್ದರು. ಇತರ ಪಕ್ಷದವರೂ ನಾಯ್ಡು ಕುರಿತು ಪ್ರಶಂಸಾ ಭಾವನೆ ಹೊಂದಿದ್ದಾರೆ.

ಆಗಸ್ಟ್ 5ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು ವಿಪಕ್ಷಗಳ ಅಭ್ಯರ್ಥಿಯಾಗಿ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News