ಕೈದಿಗಳ ಉಪವಾಸ
Update: 2017-07-18 18:29 IST
ಬೆಂಗಳೂರು, ಜು.18: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಮುಖ್ಯ ಅಧೀಕ್ಷಕ ಹುದ್ದೆಯಿಂದ ಕೃಷ್ಣಕುಮಾರ್‌ನನ್ನು ವರ್ಗಾವಣೆಗೊಳಿಸಿದ ರಾಜ್ಯ ಸರಕಾರ ಆ ಸ್ಥಾನಕ್ಕೆ ಪ್ರಭಾರ ಅಧೀಕ್ಷಕಿಯಾಗಿದ್ದ ಆರ್.ಅನಿತಾನನ್ನು ನೇಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೈಲಿನಲ್ಲಿರುವ ನೂರಕ್ಕೂ ಹೆಚ್ಚು ಕೈದಿಗಳು ಉಪವಾಸ ನಡೆಸಿದರು ಎನ್ನಲಾಗಿದೆ.
ವರ್ಗಾವಣೆ ಸರಿಯಲ್ಲ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಮೇಲೆ ನಡೆಯುತ್ತಿದ್ದ ಹಲ್ಲೆ, ಕಳಪೆ ವೈದ್ಯಕೀಯ ವ್ಯವಸ್ಥೆ, ಪ್ರತಿಯೊಂದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಸೇರಿದಂತೆ ಜೈಲಿನ ಅನೇಕ ಅವ್ಯವಹಾರಗಳನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಬಯಲಿಗೆಳೆದಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಮೊದಲೇ ಅಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರಕಾರ ವರ್ಗಾವಣೆ ಮಾಡಿರುವುದು ಸರಿಯಲ್ಲ. ಪುನಃ ರೂಪಾ ಅವರನ್ನು ಕಾರಾಗೃಹ ಡಿಐಜಿಯಾಗಿ ನೇಮಕ ಮಾಡಿ, ಅನ್ಯಾಯವಾದವರಿಗೆ ನ್ಯಾಯ ಒದಗಿಸಬೇಕೆಂದು ಕೈದಿಗಳು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.