×
Ad

ರಾಜ್ಯಕ್ಕೆ ಪ್ರತ್ಯೇಕ ಧ್ವಜ: ಬಿಜೆಪಿ ತೀವ್ರ ವಿರೋಧ

Update: 2017-07-18 19:13 IST

ಬೆಂಗಳೂರು,ಜು.18: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜವೊಂದನ್ನು ವಿನ್ಯಾಸಗೊಳಿಸುವ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಬಿಜೆಪಿ ಮಂಗಳವಾರ ತೀವ್ರವಾಗಿ ವಿರೋಧಿಸಿದ್ದು, ಇದೊಂದು ದೇಶ ವಿರೋಧಿ ಕೃತ್ಯವೆಂದು ಬಣ್ಣಿಸಿದೆ.

 ರಾಜಕೀಯ ಹಿತಾಸಕ್ತಿಗಿಂತಲೂ ರಾಷ್ಟ್ರೀಯ ಸಂವೇದನೆಗಳು ಶ್ರೇಷ್ಠವಾದುದೆಂದು ಬಿಜೆಪಿ ಸ್ಪಷ್ಟವಾದ ಅಭಿಪ್ರಾಯವನ್ನು ಹೊಂದಿದೆಯೆಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ. ‘‘ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ರಾಜ್ಯಕ್ಕೆ ಪ್ರತ್ಯೇಕ ಧ್ವಜವನ್ನು ರೂಪಿಸುವ ಚಿಂತನೆಯನ್ನು ಒಪ್ಪಿಕೊಳ್ಳುವುದೇ ಎಂಬುದನ್ನು ನಮಗೆ ತಿಳಿಸಬೇಕಾಗಿದೆ’’ ಎಂದು ಅದು ಹೇಳಿದೆ.

  ಪ್ರತ್ಯೇಕ ರಾಜ್ಯಧ್ವಜವನ್ನು ವಿನ್ಯಾಸಗೊಳಿಸುವ ಸಿದ್ದರಾಮಯ್ಯ ಸರಕಾರದ ಚಿಂತನೆಯು ದೇಶದ ಏಕತೆಗೆ ವಿರುದ್ಧವಾದುದಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ‘‘ ಬಿಜೆಪಿಯು ಒಂದೇ ರಾಷ್ಟ್ರ, ಒಂದೇ ಧ್ವಜಕ್ಕಾಗಿ ಹೋರಾಡಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆಯೊಡ್ಡುವುದು ಸಂಪೂರ್ಣ ತಪ್ಪಾದುದಾಗಿದೆ. ನಮ್ಮ ಪಕ್ಷವು ಅದನ್ನು ಬೆಂಬಲಿಸಲಾರದು’’ ಎಂದು ಅವರು ಹೇಳಿದ್ದಾರೆ. ಕಾಶ್ಮೀರ ಕೂಡಾ ಪ್ರತ್ಯೇಕ ಧ್ವಜವನ್ನು ಹೊಂದಿರಬಾರದು. ಸಿದ್ದರಾಮಯ್ಯ ಸರಕಾರದ ನಡೆಯು ದೇಶದ ಹಿತಾಸಕ್ತಿಗೆ ವಿರುದ್ಧವಾದುದು’’ ಎಂದವರು ಹೇಳಿದ್ದಾರೆ.

 ರಾಜ್ಯಕ್ಕೆ ಪ್ರತ್ಯೇಕ ಧ್ಜಜವನ್ನು ವಿನ್ಯಾಸಗೊಳಿಸುವುದಕ್ಕೆ ಬಿಜೆಪಿಯ ವಿರೋಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದ್ದಾರೆ. ‘‘ಎಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲವೆಂದು ಅವರು ಹೇಳಿಕೆ ನೀಡಲಿ ನೋಡೋಣ’’ ಎಂದು ಅವರು ಸವಾಲೊಡ್ಡಿದ್ದಾರೆ.

 ಈ ಮಧ್ಯೆ ಕೇರಳದ ಕಾಂಗ್ರೆಸ್ ಸಂಸದ ಶಶಿಥರೂರ್ ಕೂಡಾ ಸಿದ್ದರಾಮಯ್ಯ ಸರಕಾರದ ನಿಲುವನ್ನು ಸಮರ್ಥಿಸಿದ್ದಾರೆ. ರಾಷ್ಟ್ರ ಧ್ವಜದ ಶ್ರೇಷ್ಠತೆಯನ್ನು ಉಲ್ಲಂಘಿಸದೆ ರಾಜ್ಯವು ತನ್ನ ಧ್ವಜವನ್ನು ಹಾರಿಸಬಹುದಾಗಿದೆಯೆಂದವರು ಹೇಳಿದ್ದಾರೆ.

ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು ಟ್ವೀಟ್ ಮಾಡಿ, ತನ್ನ ಸರಕಾರದ ನಿಲುವನ್ನು ಸಮರ್ಥಿಸಿದ್ದಾರೆ. ಸಂವಿಧಾನದ ಚೌಕಟ್ಟಿನೊಳಗೆ ರಾಜ್ಯವು ವಿಶಿಷ್ಟವಾದ ಗುರುತನ್ನು ಹೊಂದುವುದರಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ.
 ಪ್ರಸ್ತುತ ರಾಜ್ಯೋತ್ಸವ ಸೇರಿದಂತೆ ಕರ್ನಾಟಕ ಸರಕಾರದ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಕೆಂಪು ಹಾಗೂ ಹಳದಿ ಬಣ್ಣವಿರುವ ಅನಧಿಕೃತ ರಾಜ್ಯಧ್ವಜವನ್ನು ಹಾರಿಸಲಾಗುತ್ತಿದೆ.


   ಭಾರತವು ಒಂದು ರಾಷ್ಟ್ರವಾಗಿದೆ. ಒಂದೇ ದೇಶದಲ್ಲಿ ಎರಡು ಧ್ವಜಗಳು ಇರಲು ಸಾಧ್ಯವಿಲ್ಲ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

‘‘ ಬಿಜೆಪಿಯು ಒಂದೇ ರಾಷ್ಟ್ರ, ಒಂದೇ ಧ್ವಜಕ್ಕಾಗಿ ಹೋರಾಡಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆಯೊಡ್ಡುವುದು ಸಂಪೂರ್ಣ ತಪ್ಪಾದುದಾಗಿದೆ. ನಮ್ಮ ಪಕ್ಷವು ಅದನ್ನು ಬೆಂಬಲಿಸಲಾರದು’’
ಶೋಭಾ ಕರಂದ್ಲಾಜೆ
ಬಿಜೆಪಿ ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News