ಸಮಿತಿ ಶಿಫಾರಸು ಆದರಿಸಿ ಮುಂದಿನ ಕ್ರಮ: ಸಿಎಂ
ಬೆಂಗಳೂರು, ಜು. 18: ಕನ್ನಡ ನಾಡಿಗೆ ಪ್ರತ್ಯೇಕ ಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಡಾ.ಪಾಟೀಲ ಪುಟ್ಟಪ್ಪಸೇರಿ ಹಲವಾರು ಕನ್ನಡಪರ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಪರಿಶೀಲನೆಗೆ ರಾಜ್ಯ ಸರಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದೆ. ಆ ಸಮಿತಿ ನೀಡುವ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ನಾಡಗೀತೆ ಅಧಿಕೃತವಾಗಿದೆ. ಅದೇ ರೀತಿ ನಾಡ ಧ್ವಜವಿದ್ದರೆ ತಪ್ಪೇನೂ ಇಲ್ಲ. ಆದರೆ, ಸರಕಾರ ಈ ವಿಚಾರದಲ್ಲಿ ಪ್ರಸ್ತುತ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಮಿತಿ ನೀಡುವ ಶಿಫಾರಸನ್ನು ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.
ಆದರೆ, ಈ ವಿಚಾರಕ್ಕೆ ವಿವಾದದ ಸ್ವರೂಪ ನೀಡುವ ಪ್ರಯತ್ನ ನಡೆದಿದೆ. ಬಿಜೆಪಿ ನಾಯಕರು ಇಂಥ ವಿಷಯದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ. ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡ ಎಂದು ಬಿಜೆಪಿಯ ಮುಖಂಡರು ಹೇಳಿಕೆ ಕೊಡಲಿ ಎಂದು ಸವಾಲು ಹಾಕಿದರು.
ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಿಲ್ಲ. ಚುನಾವಣೆ ಇರುವುದು ಮುಂದಿನ ಮೇ ತಿಂಗಳಿನಲ್ಲಿ ನಾಳೆ ಅಥವಾ ನಾಳಿದ್ದು ಅಲ್ಲ. ಪ್ರತ್ಯೇಕ ಧ್ವಜ ಕುರಿತು ಸಂವಿಧಾನದಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಬಿಜೆಪಿ ನಾಯಕರು ಮಾತನಾಡಲಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರತ್ಯೇಕ ಧ್ವಜ ಹೊಂದುವುದು ರಾಷ್ಟ್ರೀಯತೆ ಅಥವಾ ದೇಶದ ಏಕತೆಗೆ ವಿರುದ್ಧ ಅಲ್ಲ. ಇದರಿಂದ ರಾಷ್ಟ್ರಧ್ವಜದ ಮೇಲಿನ ಗೌರವ ಕಡಿಮೆ ಆಗುವುದಿಲ್ಲ. ಗೌರವ ಕೊಟ್ಟೇ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.
ರಾಷ್ಟ್ರಧ್ವಜ ಯಾವಾಗಲೂ ಎತ್ತರದಲ್ಲಿ ಹಾರಾಡಬೇಕು. ಅದನ್ನು ಮೀರಿಸಿ ಮತ್ತೊಂದು ಧ್ವಜವನ್ನು ಹಾರಿಸುವ ಪ್ರಶ್ನೆಯೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತ್ಯೇಕ ಧ್ವಜ ಹೊಂದುವುದಕ್ಕೆ ಸಂವಿಧಾನದಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.