ರಾಜ್ಯಪಾಲರಿಗೆ ರವಿಕೃಷ್ಣಾರೆಡ್ಡಿ ಮನವಿ
ಬೆಂಗಳೂರು, ಜು. 18: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಸಚಿವರ ಹಿತದೃಷ್ಟಿಯಿಂದ ಕೇಂದ್ರ ಜಾರಿಗೆ ತಂದಿರುವ ‘ರಿಯಲ್ ಎಸ್ಟೇಟ್ ರೆಗ್ಯೂಲೇಷನ್ ಆ್ಯಂಡ್ ಡೆವಲಪ್ಮೆಂಟ್ ಆಕ್ಟ್’ಗೆ ರಾಜ್ಯ ಸರಕಾರ ದುರ್ಬಲ ನಿಯಾಮವಳಿ ರೂಪಿಸಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ದೂರಿದ್ದಾರೆ.
ಈಗಾಗಲೆ ಆರಂಭವಾಗಿರುವ ಬಹುತೇಕ ಯೋಜನೆಗಳನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ಹುನ್ನಾರ ರಾಜ್ಯ ಸರಕಾರ ಮಾಡಿದೆ. ಶೇ.60 ರಷ್ಟು ಮಾರಾಟವಾಗಿರುವ ಎಲ್ಲ ಪ್ರಸ್ತುತ ಯೋಜನೆಗಳನ್ನು ಹೊರಗಿಡುವ ಮೂಲಕ ಇದು ಈಗಾಗಲೆ ರಾಜ್ಯದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳ ಗ್ರಾಹಕರಿಗೆ ಕೇಂದ್ರ ಸರಕಾರ ತಂದ ಕಾಯ್ದೆಯ ಲಾಭ ಮತ್ತು ಭದ್ರತೆ ಸಿಗದಂತೆ ಮಾಡಿದ್ದಾರೆ.
ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಂ.ಆರ್.ಸೀತಾರಾಂ, ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್, ರೋಷನ್‌ಬೇಗ್, ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ, ಸಂತೋಷ್ ಲಾಡ್, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಅನೇಕರು ನೇರವಾಗಿ ಅಥವಾ ಪರೋಕ್ಷವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.
ಯಾವ್ಯಾವ ಸಚಿವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾಲುದಾರಿಕೆ ಹೊಂದಿದ್ದಾರೆಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು. ಅಲ್ಲದೆ, ರೇರಾ ಕಾಯ್ದೆಗೆ ಮತ್ತೆ ಹೊಸದಾಗಿ ತೀರ್ಮಾನ ಕೈಗೊಳ್ಳಬೇಕೆಂದು ರವಿಕೃಷ್ಣಾರೆಡ್ಡಿ, ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.