ಔಷಧಿಗಳ ಹಗರಣ ತನಿಖೆಗೆ ಆಗ್ರಹ
ಬೆಂಗಳೂರು, ಜು.18: ಆರೋಗ್ಯ ಇಲಾಖೆಯಲ್ಲಿ ಅನಗತ್ಯವಾಗಿ ಔಷಧಿಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ವಿತರಣೆ ಮಾಡದೆ, ಅವಧಿ ಮೀರಿದೆ ಎಂದು ಕೋಟ್ಯಂತರ ರೂ.ಗಳ ಮೌಲ್ಯದ ಔಷಧಿಗಳನ್ನು ನಾಶ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಜೆಡಿಯು ಮುಖಂಡರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಅವಧಿ ಮೀರಿದ ಹಾಗೂ ಗುಣಮಟ್ಟವಿಲ್ಲ ಎಂದು ಸುಮಾರು 6.34 ಕೋಟಿ ರೂ.ಗಳ ವೌಲ್ಯದ 4.91 ಲಕ್ಷಕ್ಕೂ ಅಧಿಕ ಕೆ.ಜಿ.ಗಳಷ್ಟು ಔಷಧಿಗಳನ್ನು ನಾಶ ಮಾಡಲಾಗಿದೆ. ಪರಿಸರ ನಿಧಿಯಲ್ಲಿ ಮೀಸಲಿಟ್ಟ 2.35 ಕೋಟಿ ರೂ.ಗಳನ್ನು 7 ಔಷಧ ಸಂಸ್ಥೆಗಳಿಗೆ ಪಾವತಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ವ್ಯರ್ಥ ಮಾಡಿರುವ ಆರೋಗ್ಯ ಇಲಾಖೆ ಆಯುಕ್ತರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಯು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಡಾ.ಎಂ.ಪಿ.ನಾಡಗೌಡರು ಸದನ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಔಷಧಿ ಅನುಷ್ಠಾನ ಕಾಯ್ದೆಯಡಿ ನೀಡಿದ್ದ ವರದಿಯನ್ನು ಪಾಲಿಸಿದ್ದರೆ ಕೋಟ್ಯಂತರ ವೌಲ್ಯದ ಲಕ್ಷಾಂತರ ಕೆ.ಜಿ.ಗಳಷ್ಟು ವೌಲ್ಯದ ಔಷಧಿಗಳನ್ನು ನಾಶ ಮಾಡುವ ಅಗತ್ಯವಿರುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.