×
Ad

ಬಿಎಸ್‌ವೈ ಸಂಬಂಧಿಗಾಗಿ ಶೋಧ

Update: 2017-07-18 20:58 IST

ಬೆಂಗಳೂರು, ಜು.18: ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಸಂಬಂಧಿ ಎನ್.ಆರ್. ಸಂತೋಷ್‌ಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

ಪ್ರಕರಣದಲ್ಲಿ ಸಂತೋಷ್ ಭಾಗಿಯಾಗಿರುವ ಬಗ್ಗೆ ಸಂಶಯ ಇರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಸಂತೋಷ್‌ನನ್ನು ಹುಡುಕಿಕೊಂಡು ಬಿ.ಎಸ್.ಯಡಿಯೂರಪ್ಪಅವರ ನಿವಾಸದಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಆದರೆ, ಅಲ್ಲೂ ಸಂತೋಷ್ ಸುಳಿವು ದೊರೆತಿಲ್ಲ. ತಲೆಮರೆಸಿಕೊಂಡಿರುವ ಸಂತೋಷ್ ರವಿವಾರ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅದರಂತೆ ನೋಟಿಸ್ ಸಮೇತ ಪೊಲೀಸ್ ತಂಡ ಅಲ್ಲಿಗೆ ಹೋಗಿತ್ತು ಎಂದು ತಿಳಿದುಬಂದಿದೆ.

ಸಂತೋಷ್ ಪತ್ತೆಗಾಗಿ ಈಗಾಗಲೇ ವಿಶೇಷ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಾತ್ರ ಇರುವ ಅನುಮಾನವಿದ್ದು, ಸದ್ಯದಲ್ಲೇ ವಿಚಾರಣೆಗೊಳಪಡಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಂಬಂಧಿ ಸಂತೋಷ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರೆ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News