ಬಿಎಸ್‌ವೈ ವಿರುದ್ಧ ಕ್ರಮ ಕೈಗೊಳ್ಳಿ: ಆರೆಸ್ಸೆಸ್ ಮಾಜಿ ಪ್ರಚಾರಕನಿಂದಲೇ ಆಯೋಗಕ್ಕೆ ದೂರು
ಬೆಂಗಳೂರು, ಜು.18: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಂಗಳೂರು ಬಿಜೆಪಿ ಸಂಸದ ನಳಿನ್‌ಕುಮಾರ್ ಕಟೀಲು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆರೆಸ್ಸೆಸ್ ಮಾಜಿ ಪ್ರಚಾರಕ ಎನ್ನಲಾದ ಎನ್.ಹನುಮೇಗೌಡ ಎಂಬವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಮಂಗಳವಾರ ನಗರದ ಬಹುಮಹಡಿ ಕಟ್ಟಡದಲ್ಲಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಚೇರಿಗೆ ಆರೆಸ್ಸೆಸ್ ಮಾಜಿ ಪ್ರಚಾರಕ ಎನ್ನಲಾದ ಎನ್.ಹನುಮೇಗೌಡ ಭೇಟಿ ನೀಡಿ, ಮಂಗಳೂರು ಗಲಭೆ ವಿಷಯದಲ್ಲಿ ಪ್ರಭಾವಿ ರಾಜಕೀಯ ನಾಯಕರು ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳಿ. ಅದೇ ರೀತಿ, ಈ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಹನುಮೇಗೌಡ, ‘ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿ ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದು, ಯಡಿಯೂರಪ್ಪರ ಪ್ರಚೋದನಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಮುಂದೆ ರಾಜ್ಯವೇ ಕೋಮು ಗಲಭೆಗೆ ಕಾರಣವಾದರೆ ಅದಕ್ಕೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಹೊಣೆ ಹೊರಬೇಕಾಗುತ್ತದೆ ಎಂದ ಅವರು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಜನತೆ ಹಿತಕ್ಕಾಗಿಯೇ ಹೊರತು, ಸ್ವಾರ್ಥ ಸಾಧನೆ, ಸ್ವಹಿತಾಸಕ್ತಿ, ಪಕ್ಷಪಾತಕ್ಕಲ್ಲ ಎಂದರು.
ಈ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲು ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದು ಗೊತ್ತಿದೆ ಎಂದು ಹೇಳಿಕೆ ಕೊಟ್ಟಿದ್ದರು. ಆ ಮೂಲಕ ಸರಕಾರಕ್ಕೆ ಬೆದರಿಕೆ ಹಾಕಿದ್ದರು. ಆದರೆ, ರಾಜ್ಯ ಸರಕಾರ ಅಸಹಾಯಕತೆಯಿಂದಲೂ, ಪಕ್ಷಪಾತದಿಂದಲೂ, ಕರ್ತವ್ಯ ನಿರ್ಲಕ್ಷ ತೋರಿ ಮೌನಕ್ಕೆ ಶರಣಾದ ಕಾರಣ, ಇದೀಗ ಮತ್ತೊಮ್ಮೆ ಅಂತಹದ್ದೆ ಧ್ವನಿ ಮೊಳಗಿದೆ ಎಂದು ಅವರು ಆರೋಪಿಸಿದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹೈಗ್ರೌಂಡ್ಸ್ ಠಾಣಾ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್‌ಕುಮಾರ್ ಕಟೀಲು ಮೇಲೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಮಾನವ ಹಕ್ಕುಗಳ ಆಯೋಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿ ಎಂದು ಹನುಮೇಗೌಡ ಒತ್ತಾಯಿಸಿದರು.