×
Ad

ದುಬಾರಿ ವೆಚ್ಚದ ವಿಶ್ವ ಕನ್ನಡ ಸಮ್ಮೇಳನದಿಂದ ಪ್ರಯೋಜನವಿಲ್ಲ: ಪ್ರೊ.ಬರಗೂರು ಅಸಮಾಧಾನ

Update: 2017-07-18 21:13 IST

ಬೆಂಗಳೂರು, ಜು.18: ಕನ್ನಡ ಭಾಷೆ, ಸಾಹಿತ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳದ ರಾಜ್ಯ ಸರಕಾರ, 20 ಕೋಟಿ ರೂ.ಗಳಷ್ಟು ದುಬಾರಿ ವೆಚ್ಚದಲ್ಲಿ ಮೂರನೆ ವಿಶ್ವ ಕನ್ನಡ ಸಮ್ಮೇಳನ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರತ್ಯೇಕತೆ ಭಾವ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಕರ್ನಾಟಕ ಏಕೀಕರಣ ವಜ್ರ ಮಹೋತ್ಸವದ ಹೆಸರಿನಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ 20 ಕೋಟಿ ರೂ. ವೆಚ್ಚ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯದ ಪ್ರತಿ ಮನೆ ಮನದಲ್ಲಿರುವ ಪ್ರತ್ಯೇಕ ಭಾವ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಬೇಕಿದೆ. ಈ ಕುರಿತು ಯುವ ಪೀಳಿಗೆಗೆ ವಾಸ್ತವಾಂಶವನ್ನು ಮನವರಿಕೆ ಮಾಡಲು ಕೇವಲ 2 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ನಮ್ಮಲ್ಲಿ ಸಾಕಷ್ಟು ಸಾಹಿತಿಗಳಿದ್ದಾರೆ ಎಂದು ತಿಳಿಸಿದರು.

ಕಾಲೇಜು ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ಸರಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೊದಲ ಆದ್ಯತೆ ಎಂದು ಕೂಡಲೆ ಸರಕಾರ ಆದೇಶ ಹೊರಡಿಸಬೇಕು. ಈ ಕ್ರಮದಿಂದ ಕನ್ನಡ ಮಾಧ್ಯಮ ಹಾಗೂ ಕನ್ನಡ ಭಾಷೆ ತನ್ನಿಂದತಾನೆ ಅಭಿವೃದ್ಧಿ ಹೊಂದುತ್ತದೆ. ಸರಕಾರ ಈ ನಿರ್ಧಾರ ಕೈಗೊಂಡರೆ ಏಕೀಕರಣ ಸಾರ್ಥಕತೆಯ ಜೊತೆಗೆ ಗೌರವ ಸಲ್ಲಿಸದಂತಾಗುತ್ತದೆ ಎಂದು ತಿಳಿಸಿದರು.

ಮಂದಗತಿಯ ಇಲಾಖೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯಕ್ರಮಗಳು ಮಂದಗತಿ ಪಡೆದುಕೊಂಡಿವೆ. ನಾಡಗೀತೆ ಪ್ರಮಾಣ, ರಾಷ್ಟ್ರಕವಿ ಗೌರವ ಯಾರಿಗೆ ನೀಡಬೇಕು ಎಂಬ ಕುರಿತು ಅಂತಿಮ ನಿರ್ಧಾರ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ. ಅಗತ್ಯ ಕಲಾವಿದರ ನೆರವಿಗೂ ಇಲಾಖೆ ಸಹಾಯಕ್ಕೆ ಬರುತ್ತಿಲ್ಲ. ಹಿರಿಯ ಕಲಾವಿದರಿಗೂ ಸೂಕ್ತ ಸಮಯದಲ್ಲಿ ಮಾಸಾಶನವೂ ಸಿಗುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ. ಇಲಾಖೆಯನ್ನು ಪೇಪರ್ ಮುಕ್ತ ಬದಲು ಭ್ರಷ್ಟಾಚಾರ ಮುಕ್ತಗೊಳಿಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪ್ರಶಸ್ತಿ ಕೊಟ್ಟು ಕೈ ಬಿದ್ದೋಗಿದೆ. ಸಮ್ಮೇಳನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಷ್ಟೇ ಪರಿಷತ್ತಿನ ಕೆಲಸವಲ್ಲ. ಪರಿಷತ್ತು ಕನ್ನಡ ಉಳಿವಿಗಾಗಿ ಯಾವ್ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಕನ್ನಡ ಜಾಗೃತಿಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಲು ಪ್ರತಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ಪರಿಷತ್ತು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಅವರಿಗೆ ಸೂಚಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಭು ಪರಂಪರೆಯಲ್ಲೂ ಪ್ರಜಾಪರಂಪರೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಸಿಂಹಾಸನದಲ್ಲಿ ಕುಳಿತು ಸಂವೇದನೆಯನ್ನು ಕಾಪಾಡಿಕೊಂಡು ಜನಮುಖಿ ಆಡಳಿತ ನೀಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂದಿಗೂ ಪ್ರಸ್ತುತ. ಇವರ ಹೆಸರಿನಲ್ಲಿ ಸರಕಾರವೇ ಪ್ರಶಸ್ತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮನುಬಳಿಗಾರ್, ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ, ಸಾಹಿತಿ ಡಾ.ವರದಾ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News