ದೇವಳದ ಗರ್ಭಗುಡಿಯಲ್ಲೆ ಬಿಜೆಪಿ ಮುಖಂಡನ ಆತ್ಮಹತ್ಯೆ
ಬೆಳಗಾವಿ, ಜು. 18: ಸಾಲದ ಬಾಧೆಯಿಂದ ಮನನೊಂದ ಬಿಜೆಪಿ ಮುಖಂಡ ಊರಿನ ದೇವಸ್ಥಾನದ ಗರ್ಭಗುಡಿಯಲ್ಲಿ ತನ್ನ ರಿವಾಲ್ವಾರ್‌ನಿಂದ ತಲೆಗೆ ಗುಂಡು ಹೊಡೆದುಕೊಂಡು ದೇವರ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಬಿಜೆಪಿ ಮುಖಂಡ ಶಿವನಗೌಡ ಪಾಟೀಲ್ (53) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ 6:40ರ ಸುಮಾರಿಗೆ ಹೊಲಕ್ಕೆ ತೆರಳುವುದಾಗಿ ಹೇಳಿ ಗ್ರಾಮದಲ್ಲಿನ ಗಿರಿ ಮಲ್ಲೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ಗರ್ಭ ಗುಡಿಯಲ್ಲಿ ಕೂತು ಧ್ಯಾನ ಮಾಡುವ ನೆಪದಲ್ಲಿ ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆಂದು ಹೇಳಲಾಗಿದೆ.
ಇದರಿಂದ ಉಂಟಾದ ಭಾರೀ ಶಬ್ದದ ಹಿನ್ನೆಲೆಯಲ್ಲಿ ಬೆಚ್ಚಿಬಿದ್ದ ದೇವಳದ ಪೂಜಾರಿ ಹಾಗೂ ಗ್ರಾಮಸ್ಥರು ಬಂದು ನೋಡಿದಾಗ ಶಿವನಗೌಡ ಪಾಟೀಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅತ್ಯಂತ ಸಮೀಪದಿಂದ ತಲೆಗೆ ಗುಂಡು ಹೊಡೆದುಕೊಂಡ ಹಿನ್ನೆಲೆಯಲ್ಲಿ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ಶಿವನಗೌಡ ಪಾಟೀಲ್ ತನ್ನ ಪರವಾನಿಗೆ ರಿವಾಲ್ವಾರ್‌ನಿಂದಲೇ ಗುಂಡು ಹೊಡೆದುಕೊಂಡಿದ್ದಾನೆ. ವ್ಯವಹಾರ ಹಾಗೂ ವ್ಯಾಪಾರ ಮಾಡುತ್ತಿದ್ದ ಈತ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳಿಂದ ಲಕ್ಷಾಂತರ ರೂ.ಸಾಲ ಮಾಡಿದ್ದು, ಸಾಲಗಾರರ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಂಬೆಳಗ್ಗೆಯೇ ಗ್ರಾಮದ ಗಿರಿ ಮಲ್ಲೇಶ್ವರ ದೇವಸ್ಥಾನದಲ್ಲಿ ದುರ್ಘಟನೆ ಸಂಭವಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಸಂಬಂಧ ಬೈಲಹೊಂಗಲ ತಾಲೂಕಿನ ಕಿತ್ತೂರು ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.