‘ಹಿರಿಯ ನಾಗರಿಕ’ ಎಂಬುದು ಆಲಂಕಾರಿಕ ಪದವೇ?

Update: 2017-07-18 18:37 GMT

ಮಾನ್ಯರೆ,

ಇತ್ತೀಚೆಗೆ ನಾನು ದೇರಳಕಟ್ಟೆಯಲ್ಲಿ ಮುಡಿಪು-ಸ್ಟೇಟ್‌ಬ್ಯಾಂಕ್ ಕೆಎಸ್ಸಾರ್ಟಿಸಿ ನರ್ಮ್ ಬಸ್ಸಿಗೆ ಹತ್ತಿದೆ. ನಾನು ಹಿರಿಯ ನಾಗರಿಕನಾಗಿದ್ದು, ಹಿರಿಯ ನಾಗರಿಕರಿಗೆ ಮೀಸಲಿಟ್ಟ ಸೀಟಿನಲ್ಲಿ ಯುವಕನೋರ್ವ ಕೂತಿದ್ದ. ನಾನು ನನ್ನ ಹಿರಿಯ ನಾಗರಿಕ ಕಾರ್ಡು ತೋರಿಸಿ ನಿರ್ವಾಹಕನ ಬಳಿ ಹೇಳಿದೆ. ‘‘ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಸೀಟಿನಲ್ಲಿ ಯುವಕನೋರ್ವ ಕೂತಿದ್ದಾನೆ. ಆತನನ್ನ ಅಲ್ಲಿಂದ ಎಬ್ಬಿಸಿ’’ ಎಂದೆ. ಅದಕ್ಕಾತ ನೀವೇ ಎಬ್ಬಿಸಿ ಎಂದ. ನಾನಂದೆ ‘‘ಅದು ನನ್ನ ಕೆಲಸವಲ್ಲ. ನಿಮ್ಮ ಕೆಲಸ’’. ಆತ ಏನೊಂದೂ ಮಾತನಾಡಲಿಲ್ಲ. ಬಸ್ಸಿನಲ್ಲಿದ್ದ ಪ್ರಯಾಣಿಕನೋರ್ವ ನನ್ನನ್ನು ನೋಡಿ ವ್ಯಂಗ್ಯವಾಗಿ ನಕ್ಕ. ನಾನು ನಿರ್ವಾಹಕನಲ್ಲಿ ಮತ್ತೊಮ್ಮೆ ವಿನಂತಿಸಿದರೂ ಉಡಾಫೆ ಉತ್ತರ ಸಿಕ್ಕಿತು. ಇಷ್ಟೆಲ್ಲಾ ಮಾತುಕತೆಯಾಗುತ್ತಿದ್ದರೂ ಹಿರಿಯ ನಾಗರಿಕರ ಸೀಟಿನಲ್ಲಿ ಕೂತಿದ್ದ ಗಟ್ಟಿಮುಟ್ಟಾದ ಯುವಕ ಏನೂ ಆಗಿಲ್ಲವೆಂಬಂತೆ ಆರಾಮವಾಗಿದ್ದ.
ಕೆಲ ದಿನಗಳ ಬಳಿಕ ಈ ವಿಚಾರವನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದೆ. ಅದಕ್ಕವರು ‘‘ನೀವೇ ಆ ಸೀಟಿನಿಂದ ಅವರನ್ನು ಎಬ್ಬಿಸಬೇಕಿತ್ತು’’ ಎಂಬ ಉತ್ತರವನ್ನು ನೀಡಿದರು. ಮಾನ್ಯ ಜಿಲ್ಲಾಧಿಕಾರಿಯವರೇ, ಹಾಗಿದ್ದರೆ ಬಸ್ಸಲ್ಲಿ ನಿರ್ವಾಹಕನ ಹುದ್ದೆಯ ಅಗತ್ಯವೇನು? ಬರೀ ಟಿಕೆಟ್ ನೀಡುವುದು ಮಾತ್ರವೆಂದಾದರೆ, ನಿರ್ವಾಹಕ ಎಂಬ ಹುದ್ದೆಯನ್ನು ತೆಗೆದು ಹಾಕಿ ಅದರ ಬದಲಿಗೆ ‘ಟಿಕೆಟ್ ಸಂಗ್ರಾಹಕ’ ಎಂಬ ಪದನಾಮವನ್ನು ನಿರ್ವಾಹಕರಿಗೆ ನೀಡಬಹುದಲ್ಲವೇ?.
ಓರ್ವ ಜವಾಬ್ದಾರಿಯುತ ಜಿಲ್ಲಾಧಿಕಾರಿಯವರೇ ಇಂತಹ ಉತ್ತರ ನೀಡಿದರೆ ನಮ್ಮ ಅಹವಾಲನ್ನು ಯಾರಿಗೆ ಸಲ್ಲಿಸಬೇಕು?

Writer - -ಮಟ್ಟು ಪುತ್ತುಬಾವ ಘಜನಿ

contributor

Editor - -ಮಟ್ಟು ಪುತ್ತುಬಾವ ಘಜನಿ

contributor

Similar News