ಪತ್ನಿಯ ಕೊಲೆ: ಪತಿಯ ವಿರುದ್ಧ ದೂರು
ಬೆಂಗಳೂರು, ಜು.19: ಕೌಟುಂಬಿಕ ವಿಚಾರವಾಗಿ ಜಗಳ ನಡೆದು ಪತಿಯೇ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾದ ಘಟನೆ ಜಿಗಣಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕುಂತಲರೆಡ್ಡಿ ಲೇಔಟ್‌ನ ನಿವಾಸಿಯಾಗಿರುವ ಮೂಲತಃ ಗೌರಿಬಿದನೂರಿನ ರಂಜನಿ ಎಂಬಾಕೆ ಕೊಲೆಯಾದ ಪತ್ನಿ ಎನ್ನಲಾಗಿದ್ದು, ಹದಿನೈದು ವರ್ಷದ ಹಿಂದೆ ಕರಿತಿಮ್ಮಯ್ಯ ಎಂಬವರನ್ನು ರಂಜನಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ದಂಪತಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಮಂಗಳವಾರ ರಾತ್ರಿ ದಂಪತಿ ಜಗಳವಾಡಿದ್ದು, ಬುಧವಾರ ಮುಂಜಾನೆ 6:30ರ ಸುಮಾರಿಗೆ ಪತಿ ಕರಿತಿಮ್ಮಯ್ಯ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗುತ್ತಿದೆ. ಪ್ರಕರಣ ಸಂಬಂಧ ರಂಜನಿ ಪೋಷಕರು ಪೊಲೀಸರಿಗೆ ಕರಿತಿಮ್ಮಯ್ಯ ವಿರುದ್ಧ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.