ಗೋವಾ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜು.19: ಮಹದಾಯಿ ನದಿ ನೀರಿನ ಹಂಚಿಕೆ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಬರೆದ ಪತ್ರವನ್ನು ತಿರಸ್ಕರಿಸಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹಾಗೂ ನೀರಾವರಿ ಸಚಿವ ವಿನೋದ್ ಪಾಳ್ಕೇಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಲ್ಲೇಶ್ವರಂ ವೃತ್ತದ ರಾಷ್ಟ್ರಕವಿ ಕುವೆಂಪು ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಗೋವಾ ಸರಕಾರದ ವಿರುದ್ಧ ಘೋಷಣೆಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಮಾತುಕತೆಗಾಗಿ ಬರೆದ ಪತ್ರವನ್ನು ತಿರಸ್ಕರಿಸುವ ಮೂಲಕ ಪರಿಕ್ಕರ್ ಉದ್ಧಟತನ ತೋರಿಸಿದ್ದಾರೆ ಎಂದು ದೂರಿದರು.
ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಗೋವಾ ಸರಕಾರದ ಜತೆ ಮಾತುಕತೆಗೆ ಮುಂದಾಗದೆ ಕೂಡಲೆ ಕಾನೂನು ಹೋರಾಟ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.